23ರ ಹರೆಯದಲ್ಲಿ ದೇಶವೇ ಹೆಮ್ಮೆ ಪಡುವ ‘ಉಪಗ್ರಹ’ಸಾಧನೆ!ಕಾಫಿ ನಾಡಿನ ಯುವಕನ ಸಾಧನೆ ಕೊಂಡಾಡಿದ ಪ್ರಧಾನಿ ಮೋದಿ

ಚಿಕ್ಕಮಗಳೂರು: ಡಿಸೆಂಬರ್ ಒಳಗೆ ದೇಶದ ಮೊದಲ ಖಾಸಗಿ ಉಪಗ್ರಹ ಉಡಾವಣೆಗೊಳ್ಳಲಿದ್ದು, ಅದರ ಸಾರಥಿ ತಾಲೂಕಿನ ಆಲ್ದೂರಿನ ಯುವಕ ಅವೇಜ್ ಅಹಮದ್ ಆಗಲಿದ್ದಾರೆ.
23ರ ಹರೆಯದ ಅವೇಜ್ ಅಹಮದ್ ಖಾಸಗಿ ಉಪಗ್ರಹ ಉಡಾವಣೆ ಸಂಬಂಧ ಈಗಾಗಲೇ ಪ್ರಧಾನಿ ಮೋದಿ ಜೊತೆ ಎರಡು ಬಾರಿ ಮಾತನಾಡಿದ್ದಾರೆ. ಕಳೆದ ಡಿಸೆಂಬರ್‍ನಲ್ಲಿ ಉಡಾವಣೆಯಾಗಬೇಕಿದ್ದ ಉಪಗ್ರಹ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಇದೀಗ ಮುಂಬರೋ ಡಿಸೆಂಬರ್ ಒಳಗೆ ಉಪಗ್ರಹ ಉಡಾವಣೆಗೊಳ್ಳಲಿದ್ದು, ಇಸ್ರೋ ದಿನಾಂಕ ನಿಗದಿ ಮಾಡಬೇಕಿದೆ. ಆರಂಭದಲ್ಲಿ ಈ ಉಪಗ್ರಹ ರಷ್ಯಾದಿಂದ ಉಡಾವಣೆಗೊಳ್ಳಬೇಕಿತ್ತು. ವಿಷಯ ತಿಳಿದ ಕೇಂದ್ರ ಸರ್ಕಾರ ವಿಜ್ಞಾನಿಗಳ ಜೊತೆ ಮಾತನಾಡಿ ನಿಮಗೆ ಬೇಕಾದ ಎಲ್ಲಾ ಸಪೋರ್ಟ್ ಮಾಡಲಿದ್ದೇವೆ ಎಂದು ಹೇಳಿದ್ದರಿಂದ ಇಂದು ಈ ಉಪಗ್ರಹ ಭಾರತದ ಮಣ್ಣಲ್ಲೇ ಉಡಾವಣೆಗೊಳ್ಳಲಿದೆ.
ಭಾರತದಲ್ಲಿ ಹುಟ್ಟಿದ್ದೇವೆ. ಏನೇ ಮಾಡಿದರೂ ಭಾರತಕ್ಕೆ ಮಾಡಬೇಕು ಎಂದು ಅವೇಜ್ ಅಹಮದ್ ನಾಸದಲ್ಲಿ ಸಿಕ್ಕ ಕೆಲಸವನ್ನೂ ಬಿಟ್ಟು ಬಂದಿದ್ದರು. ಬೆಂಗಳೂರಿನಲ್ಲಿ ಪಿಕ್ಸೆಲ್ ಕಂಪನಿ ತೆರೆದು ಓದುವಾಗಲೇ ಏರ್ ಸ್ಪೇಸ್‍ನತ್ತ ಆಸಕ್ತಿ ಬೆಳೆಸಿಕೊಂಡಿದ್ದರು. ಅದರ ಪರಿಣಾಮ ಇಂದು ದೇಶದ ಮೊದಲ ಖಾಸಗಿ ಉಪಗ್ರಹಕ್ಕೆ ಕಾಫಿನಾಡ ಹುಡುಗ ಸಾರಥಿಯಾಗಲಿದ್ದಾರೆ. ಮುಂದಿನ 2-3 ವರ್ಷದಲ್ಲಿ ಸುಮಾರು 36 ಖಾಸಗಿ ಉಪಗ್ರಹಗಳು ಉಡಾವಣೆಗೊಳ್ಳಲಿವೆ.

ಯಾರು ಅವೇಜ್ ಅಹಮದ್: 23 ವರ್ಷದ ಅವೇಜ್ ಅಹಮದ್ ಚಿಕ್ಕಮಗಳೂರು ತಾಲೂಕಿನ ಆಲ್ದೂರು ನಿವಾಸಿ. ಮದ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಇವರ ತಂದೆ ನದೀಮ್ ಅಹಮದ್. ಮೆಡಿಕಲ್ ಸ್ಟೋರ್ ಇಟ್ಟುಕೊಂಡಿದ್ದಾರೆ. ಮಗ ಏನು ಓದುತ್ತಾನೆ, ಅವನಿಗೆ ಯಾವುದರಲ್ಲಿ ಆಸಕ್ತಿ ಇತ್ತೋ ಅದರಲ್ಲೇ ಓದಿಸಿದ್ದಾರೆ. ಇಡೀ ಜೀವನವನ್ನೇ ಮಗನಿಗಾಗಿ ಮುಡಿಪಾಗಿಟ್ಟು ಒಂದು ಸ್ವಂತ ಮನೆಯನ್ನೂ ನಿರ್ಮಿಸಿಕೊಳ್ಳದೆ ಮಗನಿಗೆ ಜೀವನ ಸೆವೆಸಿದ್ದರಿಂದ ಇಂದು 23 ವರ್ಷದ ಅವೇಜ್ ಅಹಮದ್ ದೇಶವೇ ಮೆಚ್ಚುವ ಸಾಧನೆಗೈದಿದ್ದಾರೆ.
ಆಲ್ದೂರು ಹಾಗೂ ಸಂಗಮೇಶ್ವರಪೇಟೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ ಅವೇಜ್ ಅಹಮದ್ ದೇಶದ ಬಿಡ್ಸ್ ಪಿಲಾನಿ ಯುನಿವರ್ಸಿಟಿಯಲ್ಲಿ ಓದಿ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ಸ್ವತಃ ಇಂದಿರಾ ಗಾಂಧಿಯೇ ಇನ್ಫ್ಲುಯೆನ್ಸ್ ಮಾಡಿದ್ರು ಸೀಟು ಸಿಗದ ಬಿಡ್ಸ್ ಪಿಲಾನಿ ಯುನಿವರ್ಸಿಟಿಯಲ್ಲಿ ಮೆರಿಟ್ ಸೀಟ್ ಪಡೆದು 477 ರ‍್ಯಾಂಕ್ಗಳಿಸಿದ್ದರು. ಮೊದಲ ವರ್ಷದ ಓದಿನಲ್ಲೇ ಅಮೆರಿಕಾಗೆ ಪ್ರಯಾಣ ಬೆಳೆಸಿದ್ದರು.

ಪಿಕ್ಸೆಲ್ ಕಂಪನಿ ಆರಂಭ : ಮೂರನೇ ವರ್ಷದಲ್ಲಿ ಓದುವಾಗಲೇ ಬೆಂಗಳೂರಿನಲ್ಲಿ ಏರೋಸ್ಪೇಸ್ ಎಂಬ ಪಿಕ್ಸೆಲ್ ಕಂಪನಿ ಆರಂಭಿಸಿದ್ದರು. ಅದು ಉಪಗ್ರಹ ತಯಾರಿಕಾ ಕಂಪನಿ. ಅವೇಜ್ ಅಹಮದ್ ತಯಾರಿಸಿದ ಆ ಉಪಗ್ರಹಗಳನ್ನ ಇಸ್ರೋದಿಂದಲೇ ಉಡಾವಣೆ ಮಾಡಬೇಕೆಂಬ ಹಠ, ಆಸೆ ಅವರದ್ದಾಗಿತ್ತು. ರಷ್ಯಾದಿಂದ ಉಡಾವಣೆಗೆ ಎಲ್ಲಾ ಸಿದ್ಧತೆ ನಡೆದಿತ್ತು. ಆದರೆ ಅದು ಕೇಂದ್ರ ಸರ್ಕಾರಕ್ಕೆ ಗೊತ್ತಾಗಿ ಕೇಂದ್ರ ಸರ್ಕಾವೇ ಮುಂದೆ ನಿಂತು ಇಂದು ಉಪಗ್ರಹ ಉಡಾವಣೆಗೆ ಸಾಥ್ ನೀಡಿದೆ. ಈ ಖಾಸಗಿ ಉಪಗ್ರಹ ಕಳೆದ ವರ್ಷವೇ ಉಡಾವಣೆ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ ಉಪಗ್ರಹ ಡಿಸೆಂಬರ್ ಒಳಗೆ ಮುಗಿಲಿನತ್ತ ಮುಖ ಮಾಡಲಿದೆ.