ಚಿಕ್ಕಮಗಳೂರು: ಕಾಫಿ ಕೃಷಿಗೆ ಸಂಬಂಧಿಸಿದ ಎಲ್ಲ ರೀತಿಯ ಸಾಲವನ್ನು ಸರ್ಫೇಸಿ ಕಾಯ್ದೆ (ಸೆಕ್ಯುರಿಟೈಸೇಷನ್ ಅಂಡ್ ರೀಕನ್ಟ್ರಕ್ಷನ್ ಆಫ್ ಫೈನಾನ್ಶಿಯಲ್ ಅಸೆಟ್ ಅಂಡ್ ಎನ್ಫೋರ್ಸ್ಮೆಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್) ಯಿಂದ ಹೊರಗಿಡುವಂತೆ ಶಾಸಕರ ನೇತೃತ್ವದ ಬೆಳೆಗಾರರ ಸಂಘಟನೆಗಳ ಮುಖಂಡರ ನಿಯೋಗ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಂ ಅವರನ್ನು ಒತ್ತಾಯಿಸಿದೆ.
ಬುಧವಾರ ನವ ದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಹವಾಲು ಸಲ್ಲಿಸಿರುವುದಾಗಿ ತಿಳಿಸಿರುವ ಶಾಸಕರೂ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೂ ಆದ ಸಿ.ಟಿ.ರವಿ ಮನವಿಗೆ ಸಚಿವರು ಸಕಾರಾತ್ಮಕವಾಗಿ ಒಪ್ಪಿದ್ದಾರೆ ಎಂದಿದ್ದಾರೆ.
ಈ ಪೈಕಿ ಸರ್ಫೇಸಿ ಕಾಯ್ದೆ ಉದ್ಯಮಕ್ಕೇ ಕಂಟಕವಾಗಿ ಕಾಡುತ್ತಿರುವ ಬಗ್ಗೆ ಸಚಿವರ ಗಮನ ಸೆಳೆಯಲಾಗಿದ್ದು, ಕಾಫಿಗೆ ಸಂಬಂಧಿಸಿದ ಎಲ್ಲಾ ಸಾಲಗಳನ್ನು ಇದರಿಂದ ಹೊರಗಿಡಬೇಕು ಎಂದು ಒತ್ತಾಯಿಸಲಾಗಿದೆ ಎಂದರು.
ರಾಜ್ಯದಲ್ಲಿ ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಕಾಫಿ ಬೆಳೆಯುವ ರೈತರು ಮತ್ತು ಮತ್ತು ಕಾಫಿ ಉದ್ಯಮಿಗಳು ಸಾಂಕ್ರಾಮಿಕ ರೋಗದಿಂದ ಆರ್ಥಿಕ ಸಂಷಕ್ಟ ಎದುರಿಸುತ್ತಿದ್ದಾರೆ. ಬೆಳೆಗಾರರು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಸಾಲದ ಮೇಲೆ ವಿಧಿಸುತ್ತಿರುವ ಬಡ್ಡಿಯಿಂದ ಆರ್ಥಿಕ ಹೊರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವ ಮೂಲಕ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂದು ಒತ್ತಾಯಿಸಲಾಗಿದೆ ಎಂದಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಹೊರಡಿಸಿರುವ, ಕೃಷಿ ಸಾಲದ ಮರು ಹೊಂದಾಣಿಕೆಗೆ ಸ್ಪಷ್ಟ ಸೂಚನೆಯಿದ್ದರೂ ಕೂಡ ಹಲವು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಇತರೆ ವಾಣಿಜ್ಯ ಬ್ಯಾಂಕು ಶಾಖೆಗಳು ಬೆಳೆಗಾರರ ಸಾಲದ ಖಾತೆಗಳನ್ನು ನವೀಕರಿಸಲು ಮಾಡಲು ಹಿಂಜರಿಯುತ್ತಿವೆ. ಈ ಬಗ್ಗೆಯೂ ಬ್ಯಾಂಕುಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಲಾಗಿದೆ ಎಂದಿದ್ದಾರೆ.
ಕಾಫಿ ಬೆಳೆಗಾರರು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಮಾಡಿರುವ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸೂಚಿಸಬೇಕು ಎಂದು ಮನವಿ ಸಲ್ಲಿಸಲಾಗಿದ್ದು, ಇದಕ್ಕೆ ನಿರ್ಮಲಾ ಸೀತಾರಾಮನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಡಿಮೆ ಬಡ್ಡಿ ದರದಲ್ಲಿ ಮರುಸಾಲ ನೀಡುವುದು ಸೇರಿದಂತೆ ಹಾಲಿ ಇರುವ ಬಡ್ಡಿದರದಲ್ಲಿ ಕಾಫಿ ಬೆಳೆ ಹಾಗೂ ಇತರೆ ಕೃಷಿ ಕ್ಷೇತ್ರದ ಸಾಲಗಳನ್ನು ಮರುಪಾವತಿ ಮಾಡಲು ಸಾಧ್ಯವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಕಾಫಿ ಮತ್ತು ಇತರೆ ಕೃಷಿಯ ಸಮಗ್ರ ಸಾಲಗಳ ಮೇಲಿನ
ಬಡ್ಡಿಯನ್ನು ಶೇ.3ರಷ್ಟು ನಿಗದಿಪಡಿಸಬೇಕು ಎಂದು ಒತ್ತಾಯಿಸಲಾಗಿದೆ ಎಂದಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕಾಫಿ ಬೆಳೆಗಾರರು ಪ್ರಾಕೃತಿಕ ವಿಕೋಪಕ್ಕೆ ಒಳಗಾಗಿದ್ದಾರೆ. ಹೆಚ್ಚು ಗುಡ್ಡ ಜರುಗುವಿಕೆ, ತೋಟಗಾರಿಕೆ ಸಲಕರಣೆಗಳು, ಗಿಡಗಳು ಹಾಳಾಗುತ್ತಿವೆ. ಜೊತೆಗೆ ಸಾಂಕ್ರಾಮಿಕ ರೋಗವಾದ ಕೋವಿಡ್ನಿಂದ ನಲುಗಿ ಹೋಗಿದ್ದಾರೆ. ಎಲ್ಲವನ್ನು ಪರಿಗಣಿಸಿ ಕಾಫಿ ಬೆಳೆಗಾರರ ನೆರವಿಗೆ ಬನ್ನಿ ಎಂದು ಕೋರಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ಎಂ. ಎಸ್ ಭೋಜೇಗೌಡ, ಕೆಜಿಎಫ್ ಅಧ್ಯಕ್ಷ ಡಾ. ಎಚ್ ಟಿ ಮೋಹನ್ ಕುಮಾರ್ ಸೇರಿದಂತೆ ಕಾಫಿ ಬೆಳೆಗಾರರ ವಿವಿಧ ಒಕ್ಕೂಟಗಳ ಮುಖಂಡರು ಹಾಜರಿದ್ದರು ಎಂದಿದ್ದಾರೆ