ಪೊಲೀಸ್ ಕಸ್ಟಡಿಯಲ್ಲಿ ಪಶ್ಚಾತ್ತಾಪ ಪಡುತ್ತಿರುವ ಗಿರೀಶ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳು

ಚಿಕ್ಕಮಗಳೂರು: ಖ್ಯಾತ ಪರಿಸರವಾದಿ ಡಿ.ವಿ.ಗಿರೀಶ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಲ್ಲ ಆರೋಪಿಗಳನ್ನು ತಪ್ಪು ಒಪ್ಪಿಕೊಂಡಿದ್ದು, ತಮ್ಮನ್ನು ಬಿಟ್ಟುಬಿಡುವಂತೆ ಕೈಮುಗಿದು ಬೇಡಿಕೊಳ್ಳುತ್ತಿದ್ದಾರೆ.

‘ಇನ್ನೊಮ್ಮೆ ಹೀಗೆ ಮಾಡುವುದಿಲ್ಲ. ಗೊತ್ತಿಲ್ಲದೆ ತಪ್ಪಾಗಿದೆ. ಜೀವನದಲ್ಲಿ ಈ ರೀತಿಯ ತಪ್ಪನ್ನು ಇನ್ನೆಂದೂ ಮಾಡುವುದಿಲ್ಲ’ ಎಂದು ಪೊಲೀಸರ ಎದುರು ಆರೋಪಿಗಳು ಕೈಮುಗಿದು ತಪ್ಪೊಪ್ಪಿಕೊಂಡಿದ್ದಾರೆ.

ಏನಾಗಿತ್ತು?
ಗಿರೀಶ್ ಅವರು ತಮ್ಮ ಜಿಪ್ಸಿಯಲ್ಲಿ ಆಗಸ್ಟ್​ 30ರಂದು ಕೆಮ್ಮಣ್ಣುಗುಂಡಿ ಸಮೀಪದ ಕಟ್ಟೆಹೊಳೆ ಎಸ್ಟೇಟ್​ನಿಂದ ಗೆಳೆಯರೊಂದಿಗೆ ಹಿಂದಿರುಗುವಾಗ ಸಂತವೇರಿ ತಿರುವಿನ ಸಮೀಪ ನಿಂತಿದ್ದ ಕೆಲ ಯುವಕರು ವಾಹನದಲ್ಲಿದ್ದ ಬಾಲಕಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದರು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಕುಪಿತಗೊಂಡಿದ್ದ ಕಿಡಿಗೇಡಿಗಳು ಹಲ್ಲೆ ನಡೆಸಿದ್ದರು.

ಗಿರೀಶ್ ಅವರ ಮೇಲೆ ಹಲ್ಲೆ ನಡೆಸಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.

ಡಿ.ವಿ.ಗಿರೀಶ್ ಯಾರು?
ಪರಿಸರ ಸಂರಕ್ಷಣೆ ಚಳವಳಿಯಲ್ಲಿ ಸಕ್ರಿಯರಾಗಿರುವ ಗಿರೀಶ್ ಹಲವು ಸಂಸ್ಥೆಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹೆಸರುವಾಸಿಯಾಗಿದ್ದಾರೆ. ಭದ್ರಾ ಅಭಯಾರಣ್ಯ ಹಾಗೂ ಚಿಕ್ಕಮಗಳೂರಿನ ಪರಿಸರ ಸಂರಕ್ಷಣೆಗಾಗಿ ಯಾವುದೇ ರಾಜಿಯಿಲ್ಲದ ಅವರು ನಡೆಸಿದ ಸುದೀರ್ಘ ಹೋರಾಟವನ್ನು ಗೌರವಿಸಿ ಹಲವು ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿವೆ.

ಸ್ಕಾಟ್ಲೆಂಡ್‌ನ ಪ್ರತಿಷ್ಠಿತ ದಿ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ‘ಪ್ರೊಟೆಕ್ಟ್ ದಿ ಟೈಗರ್’ ಪ್ರಶಸ್ತಿ ಅದರಲ್ಲಿ ಪ್ರಮುಖವಾದುದು. ಇದರ ಜೊತೆಗೆ ವೈಲ್ಡ್‌ಲೈಫ್ ಕನ್ಸರ್​ವೇಶನ್ ಸೊಸೈಟಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಾರ್ಲ್ ಜೀಸ್ ವೈಲ್ಡ್ ಲೈಫ್ ಕನ್ಸರ್ವೇಶನ್ ಅವಾರ್ಡ್, ಟೈಗರ್ ಗೋಲ್ಡ್ ಸೇರಿದಂತೆ ಹತ್ತಾರು ಪುರಸ್ಕಾರಗಳು ಸಂದಿವೆ. ನೂರಾರು ಯುವಜನರಲ್ಲಿ ಪರಿಸರ ಪ್ರೀತಿಯನ್ನು ಬಿತ್ತಿ, ಮಾರ್ಗದರ್ಶನ ಮಾಡಿದ್ದಾರೆ.

ಪಶ್ಚಿಮಘಟ್ಟದ ಕುದುರೆಮುಖ- ಮುತ್ತೋಡಿ ಅಭಯಾರಣ್ಯಗಳ ಉಳಿವಿಗೆ ಗಿರೀಶ್ ನೀಡಿದ ಕೊಡುಗೆ ದೊಡ್ಡದು. 2001-02ರಲ್ಲಿ ಭದ್ರ ಅಭಯಾರಣ್ಯದಲ್ಲಿದ್ದ 450ಕ್ಕೂ ಹೆಚ್ಚು ಕುಟುಂಬಗಳ ಸ್ವಯಂ ಪ್ರೇರಿತ ಪುನರ್ವಸತಿ ವಿಚಾರದಲ್ಲಿ ಅವರು ವಹಿಸಿದ ಪಾತ್ರ ವಿಶ್ವಮಟ್ಟದಲ್ಲಿ ಸುದ್ದಿಯಾಗಿತ್ತು. 2001-02ರಲ್ಲಿ ಮುತ್ತೋಡಿ ವ್ಯಾಪ್ತಿಯ 13 ಹಳ್ಳಿಗಳ (ಮುತ್ತೋಡಿ, ಕೆಸವೆ, ಮಾಡ್ಲ, ದಬ್ಬಗಾರು, ಕರ್ವಾನಿ, ಹೆಬ್ಬೆ, ಕಂಚಿಗಾರು, ಹೆಗ್ಗಾರು, ಮತ್ವಾನಿ, ಹಿರೇಬೆಳ್ಳು, ಒಡ್ಡಿಹಟ್ಟಿ, ಪರದೇಶಪ್ಪನಮಠ, ಹಿಪ್ಲಾ) ಜನರಿಗೆ ತರೀಕೆರೆ ತಾಲ್ಲೂಕು ಲಕ್ಕವಳ್ಳಿ ಸಮೀಪ ಯೋಗ್ಯ ರೀತಿಯಲ್ಲಿ ಪುನರ್ವಸತಿ ಕಲ್ಪಿಸಲಾಯಿತು. ಇದು ನಮ್ಮ ದೇಶದ ಅತ್ಯುತ್ತಮ ಪುನರ್ವಸತಿ ಎಂದೇ ಪರಿಗಣಿತವಾಗಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಜೈರಾಂ ರಮೇಶ್ ಸಹ ಲಕ್ಕವಳ್ಳಿಗೆ ಭೇಟಿ ನೀಡಿ ಪುನರ್ವಸತಿ ಪರಿಶೀಲಿಸಿದ್ದರು.