ಚಿಕ್ಕಮಗಳೂರು: ಸಾಮಾನ್ಯವಾಗಿ ಹಾವು ಕಪ್ಪೆಯಂತಹ ಸಣ್ಣ ಜೀವಿಗಳನ್ನು ಹಿಡಿದು ತಿನ್ನುವುದನ್ನು ನಾವು ನೋಡಿರುತ್ತೇವೆ. ಆದರೆ, ಬಲು ಅಪರೂಪ ಎಂಬಂತೆ ಕೆಲವೊಮ್ಮೆ ಹಾವುಗಳು ತಮಗಿಂತ ದೊಡ್ಡದಾದ ಎನಿಸುವಂಥ, ದೊಡ್ಡ ದೇಹದ ಇತರ ಜೀವಿಗಳನ್ನು ಹಿಡಿದು ತಿಂದುಬಿಡುತ್ತವೆ. ಅಂತಹ ಅಪರೂಪದ ದೃಶ್ಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡುಬಂದಿದೆ. ಕಾಳಿಂಗದ ಈ ರೂಪ ಕಂಡು ಜನರು ಒಂದುಕ್ಷಣ ಬೆಚ್ಚಿಬಿದ್ದಿದ್ದಾರೆ. ಇಲ್ಲಿ ಬೃಹತ್ ಕಾಳಿಂಗವೊಂದು ದೊಡ್ಡ ಉಡವನ್ನು ಹಿಡಿದು ನುಂಗಿದೆ.
ಹೌದು, ಈ ವಿಚಾರ ಆಶ್ಚರ್ಯವಾದರೂ ನಿಜ. ಚಿಕ್ಕಮಗೂಳೂರಿನಲ್ಲಿ ಈ ದೃಶ್ಯ ಕಂಡ ಜನ ಒಂದು ಕ್ಷಣ ಭಯಾನಕ ಕಾಳಿಂಗ ಹಾವಿನ ಉಗ್ರರೂಪ ಕಂಡು ಅವಕ್ಕಾಗಿದ್ದಾರೆ. ಇಲ್ಲಿ ಬೃಹತ್ ಕಾಳಿಂಗವೊಂದು ದೊಡ್ಡ ಉಡವನ್ನು ನುಂಗುವ ಅತಿ ಅಪರೂಪದ ದೃಶ್ಯವನ್ನು ಜನ ಕುತೂಹಲದಿಂದ ವೀಕ್ಷಿಸಿದ್ದಾರೆ.
ಉಡ ತಾಕತ್ತಿನಲ್ಲಿ ಯಾವುದಕ್ಕೂ ಕಮ್ಮಿ ಇಲ್ಲದ ಜೀವಿ. ಛತ್ರಪತಿ ಶಿವಾಜಿ ಕಾಲದಲ್ಲಿ ಉಡಗಳನ್ನು ಬಳಸಿ ಬೆಟ್ಟವೇರಲು, ಕೋಟೆಗಳನ್ನೇರಿ ಶತ್ರುಗಳ ಮೇಲಿನ ಯುದ್ಧಕ್ಕೆ ಬಳಸಿಕೊಳ್ಳುತ್ತಿದ್ದರು ಎನ್ನುವುದು ಇತಿಹಾಸ. ಯಾಕಂದ್ರೆ ಉಡ ಅಷ್ಟು ಬಲಿಷ್ಠ ಎಂಬ ಕಾರಣಕ್ಕಾಗಿ.
ಆದರೆ, ಅದೇ ಬಲಿಷ್ಠ ಉಡವೊಂದನ್ನು ದೈತ್ಯ ಕಾಳಿಂಗ ಕಬಳಿಸಿದ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ದುರ್ಗದಹಳ್ಳಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ತೇಜಸ್ವಿ ಎಂಬುವವರಿಗೆ ಸೇರಿದ ಕೊಡಿಗೆ ಎಸ್ಟೇಟ್ನಲ್ಲಿ ಈ ಘಟನೆ ಕಾಣಲು ಸಿಕ್ಕಿದೆ. ಸಾಮಾನ್ಯವಾಗಿ ಕೇರೆ ಹಾವುಗಳಂದರೆ ಕಾಳಿಂಗ ಹಾವುಗಳಿಗೆ ಪಂಚಪ್ರಾಣ. ಅದನ್ನು ಹೊರತುಪಡಿಸಿದರೆ ಇಲಿ ಹೆಗ್ಗಣಗಳನ್ನೇ ಹೆಚ್ಚಾಗಿ ಬೇಟೆಯಾಡೋ ಕಾಳಿಂಗ ಅನಾಮತ್ತು ದೊಡ್ಡ ಉಡವನ್ನೇ ನುಂಗಿಹಾಕಿದೆ. ಬಳಿಕ, ಹಾಗೇ ಕಾಡು ಸೇರಿರೋದು ಸ್ಥಳೀಯರಿಗೆ ಭಯದ ಜೊತೆ ಚಕಿತವನ್ನೂ ಉಂಟುಮಾಡಿದೆ