ಚಿಕ್ಕಮಗಳೂರು: ಗಣೇಶ ಚತುರ್ಥಿ ದಿನದಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹೊಲದಲ್ಲಿ ಉಳುಮೆ ಮಾಡುವ ಮೂಲಕ ರೈತರ ಯೋಗಕ್ಷೇಮ ವಿಚಾರಿಸಿ ವಿನೂತನವಾಗಿ ಹಬ್ಬ ಆಚರಿಸಿದ್ದಾರೆ.
ಇಂದು ತಾಲೂಕಿನ ಹಿರೇಮಗಳೂರು ಬಳಿ ನಡೆಯುತ್ತಿದ್ದ ಕೆರೆ ಏರಿ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಅವರು, ಇದೇ ವೇಳೆ ಸಗನೀಪುರ ಗ್ರಾಮದ ಹೊಲದಲ್ಲಿ ರೈತರು ಉಳುಮೆ ಮಾಡುತ್ತಿರುವುದ್ದನ್ನು ಕಂಡು ಹೊಲಕ್ಕೆ ಭೇಟಿ ನೀಡಿದ್ದಾರೆ.
ಬಳಿಕ ಹಬ್ಬದ ದಿನ ಉಳುಮೆ ಮಾಡುತ್ತಿದ್ದೀರಾ, ಬನ್ನಿ ನಿಮ್ಮ ಜೊತೆ ನಾನು ಸೇರಿಕೊಳ್ಳುತ್ತೇನೆ ಅಂತ ರೈತರಿಂದ ಎತ್ತುಗಳನ್ನು ಪಡೆದು ಹೊಲದಲ್ಲಿ ಉಳುಮೆ ಮಾಡಿದ್ದಾರೆ.
ಉಳುಮೆ ಮಾಡುವಾಗ ರೈತರಂತೆ ನೇಗಲನ್ನು ಕಾಲಿನಲ್ಲಿ ಮೆಟ್ಟಿ ಉಳುಮೆ ಮಾಡಿ, ಎಲ್ಲರ ಗಮನ ಸೆಳೆದಿದ್ದಾರೆ. ಸಿ.ಟಿ. ರವಿ ಉಳುಮೆ ಶೈಲಿಯನ್ನು ಕಂಡು ರೈತರು ಕೂಡ ಆಶ್ಚರ್ಯಗೊಂಡಿದ್ದಾರೆ. ಭಾಷಣಗಳಲ್ಲಿ ಆಗಾಗ ನಾನು ರೈತರ ಮಗ ಎಂದು ಹೇಳುತ್ತಿದ್ದ ಅವರು, ಹಬ್ಬದಂದೇ ರೈತರ ಹೊಲದಲ್ಲಿ ಉಳುಮೆ ಮಾಡಿ ಹೊಲದಲ್ಲಿ ಹಬ್ಬ ಆಚರಿಸಿ, ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಬಳಿಕ ರೈತರ ಯೋಗಕ್ಷೇಮ ವಿಚಾರಿಸಿ, ರೈತರಿಗೆ ಗಣಪತಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಅಲ್ಲದೇ ತಾಲೂಕಿನ ಕುರುವಂಗಿ, ಸಗನೀಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಂದು ರೌಂಡ್ ಹಾಕಿ ರೈತರ ಆರೋಗ್ಯ, ಬೇಕು-ಬೇಡಗಳನ್ನು ವಿಚಾರಿಸಿದ್ದಾರೆ.