ಬೆಂಗಳೂರು : ಮೂಡಿಗೆರೆಯನ್ನು ನೆರೆ ಪೀಡಿತ ಪ್ರದೇಶದ ಪಟ್ಟಿಗೆ ಸೇರ್ಪಡೆ ಮಾಡುವಂತೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಏಕಾಂಗಿಯಾಗಿ ವಿಧಾನಸೌಧದಲ್ಲಿ ಪ್ರತಿಭಟನೆ ಮಾಡಿದ್ದರು. ಕಡೆಗೂ ಫಲ ಸಿಕ್ಕಿದ್ದು, ಮೂಡಿಗೆರೆಯನ್ನು ನೆರೆ ಪೀಡಿತ ಪ್ರದೇಶದ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಅವರು ಈ ಹಿಂದೆ 61 ತಾಲ್ಲೂಕುಗಳು ಪ್ರವಾಹ ಪೀಡಿತವೆಂದು ಘೋಷಣೆ ಮಾಡಲಾಗಿತ್ತು. ಮಳೆ ಹೆಚ್ಚಾಗಿ ಇದೀಗ ಮತ್ತೆ ಹಾನಿಯಾಗಿದೆ. ಹೀಗಾಗಿ ಹೊಸದಾಗಿ 22 ತಾಲೂಕುಗಳನ್ನು ಪ್ರವಾಹ ಪೀಡಿತವೆಂದು ಘೋಷಣೆ ಮಾಡಿದ್ದೇವೆ. ಬೆಳಗಾವಿ, ಚಿಕ್ಕಮಗಳೂರು, ಹೆಬ್ಬಳ್ಳಿ ನಗರ, ಕಡೂರು, ದಾವಣಗೆರೆ, ದಾಂಡೇಲಿ, ಆಲೂರು, ಲಕ್ಷ್ಮೇಶ್ವರ, ತರೀಕೆರೆ, ಮುಂಡಗೋಡು, ಸೂಪ, ಹುಬ್ಬಳ್ಳಿ, ಭದ್ರಾವತಿ, ಚೆನ್ನಗಿರಿ, ಅಣ್ಣಿಗೇರಿ, ಬಬಲೇಶ್ವರ, ನಿಡಗುಂದಿ, ಕೋಲ್ಹಾರ, ಮುದ್ದೆಬಿಹಾಳ, ಹರಪನಹಳ್ಳಿ, ಹೊಸನಗರ, ಮೂಡಿಗೆರೆ ತಾಲೂಕನ್ನು ಪ್ರವಾಹ ಪೀಡಿತವೆಂದು ಘೋಷಿಸಿದ್ದೇವೆ. ಪ್ರವಾಹ ಸಂದರ್ಭಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ. ಒಂದೂವರೆ ಕಿ.ಮೀ.ವರೆಗೆ ಕೇಳಿಸುವಷ್ಟು ಅಲರ್ಟ್ ಮಾಡಲಾಗುತ್ತದೆ. ಮೈಕ್ ಸಿಸ್ಟಂ ಮೂಲಕ ಅಲರ್ಟ್ ಮಾಡಲಾಗುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ಅಲರ್ಟ್ ಆಗಲಿದೆ. ಶೀಘ್ರವೇ ಈ ಹೊಸ ಸಿಸ್ಟಂನ್ನು ಅಳವಡಿಕೆ ಮಾಡುತ್ತೇವೆ ಎಂದು ವಿವರಿಸಿದರು.
ಬೆಂಗಳೂರಿನಲ್ಲೂ 50ಕ್ಕೂ ಹೆಚ್ಚು ರಸ್ತೆಗಳಲ್ಲಿ ನೀರು ನಿಲ್ಲುತ್ತಿದೆ. ಅಧಿಕಾರಿಗಳಿಗೆ ಇದರ ಬಗ್ಗೆ ಸೂಚಿಸಿದ್ದೇನೆ. ನೀರು ನಿಲ್ಲುವ ಡ್ರೈನ್ ಬಗ್ಗೆ ಸೂಚಿಸಿದ್ದೇನೆ. ಜೊತೆಗೆ ಸಮಸ್ಯೆ ಪರಿಹಾರಕ್ಕೂ ಸೂಚಿಸಿದ್ದೇನೆ, ತುರ್ತು ಕಾಮಗಾರಿ ಮುಗಿಸುವ ಬಗ್ಗೆ ಸೂಚಿಸಲಾಗಿದೆ ಎಂದು ತಿಳಿಸಿದರು.