ಹೆರಿಗೆ ವೇಳೆ ಮಗು ಮೃತ್ಯು ವೈದ್ಯರ ನಿರ್ಲಕ್ಷ್ಯ ಆರೋಪ


ಚಿಕ್ಕಮಗಳೂರು:ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ಸಂದರ್ಭ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಮಹಿಳೆಯ ಕುಟುಂಬಸ್ಥರು ನಗರದ ಜಿಲ್ಲಾಸ್ಪತ್ರೆ ಮುಂಭಾಗ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಮಡೇನೇರಲು ಗ್ರಾಮದ ವನಿತಾ ಎಂಬವರಿಗೆ ಸೋಮವಾರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕುಟುಂಬಸ್ಥರು ತಕ್ಷಣ ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಕರ್ತವ್ಯನಿರತ ವೈದ್ಯೆ ಡಾ.ಆರತಿ ಮೇಲ್ವಿಚಾರಣೆಯಲ್ಲಿ ಹೆರಿಗೆ ಮಾಡಿಸಿದ್ದು, ಮಗು ಮೃತಪಟ್ಟಿದೆ ಎಂದು ತಳಿದುಬಂದಿದೆ.
ಮಗು ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಮಾಯಿಸಿದ ಕುಟುಂಬಸ್ಥರು ಹುಟ್ಟಿದ ಮಗುವಿನ ಗುಪ್ತಾಂಗದಲ್ಲಿ ಗಾಯದ ಗುರುತು ಇದ್ದು, ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ. ಈ ಹಿನ್ನೆಲೆಯಲ್ಲಿ ಡಾ.ಆರತಿಯವರನ್ನು ಅಮಾನತು ಮಾಡುವಂತೆ ಪಟ್ಟು ಹಿಡಿದು ಜಿಲ್ಲಾ ಸರ್ಜನ್ ಡಾ.ಮೋಹನ್‍ ಕುಮಾರ್ ಕಚೇರಿಯೊಳಗೆ ನುಗ್ಗಲು ಯತ್ನಿಸಿರುವುದಾಗಿ ತಿಳಿದುಬಂದಿದೆ.

ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಧರಣಿ ನಿರತರನ್ನು ನಿಯಂತ್ರಿಸಿದರು. ಬಳಿಕ ಜಿಲ್ಲಾ ಸರ್ಜನ್ ಡಾ.ಮೋಹನ್‍ ಕುಮಾರ್ ಮಾತನಾಡಿ, ಮಹಿಳೆಯ ಕುಟುಂಬಸ್ಥರ ಆರೋಪದ ಬಗ್ಗೆ ಪರಿಶೀಲನೆ ನಡೆಸಲಾಗುವುದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.