ಚಿಕ್ಕಮಗಳೂರು : ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಸೋಲಾರ್ ವಿದ್ಯುತ್ ಅನ್ನು ಆಳವಡಿಸಿಕೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಎ.ಐ.ಟಿ ಕಾಲೇಜು ಆವರಣದಲ್ಲಿ ನಡೆದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ವಿದ್ಯುತ್ ವ್ಯತ್ಯಯದಿಂದಾಗಿ ಗ್ರಾಮ ಪಂಚಾಯಿತಿಗೆ ಜನರು ತಮ್ಮ ಕೆಲಸ ಕಾರ್ಯಗಳಿಗೆ ಆಗಮಿಸಿದಾಗ ತೊಂದರೆಯುಂಟಾಗುತ್ತಿದ್ದು, ಜನರು ತಮ್ಮ ಕೆಲಸವಾಗದೆ ಹಲವಾರು ಬಾರಿ ಗ್ರಾಮ ಪಂಚಾಯಿತಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಆದ್ದರಿಂದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲು ಸೋಲಾರ್ ವಿದ್ಯುತ್ ಅನ್ನು ಆಳವಡಿಸಿಕೊಳ್ಳುವಂತೆ ಹೇಳಿದ ಅವರು ಇದಕ್ಕೆ ಇಲಾಖೆಯಿಂದ ಅನುದಾನ ಒದಗಿಸಲಾಗುವುದು ಎಂದರು.
ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿರುವ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿಯ ಕೆಲಸವನ್ನು ತಮ್ಮ ಮನೆಯ ಕೆಲಸವೆಂದು ಭಾವಿಸಿ ಮಾಡಿದರೆ ಗ್ರಾಮಗಳು ಅಭಿವೃದ್ಧಿಯತ್ತ ಸಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.