ಬಣಕಲ್ ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಸ್ ತಂಗುದಾಣವನ್ನು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ನಯನ ಮೋಟಮ್ಮ ರವರು ಸೋಮವಾರ ಉದ್ಘಾಟಿಸಿದರು.
ಬಣಕಲ್ ಗ್ರಾಮದಲ್ಲಿ ದಶಕಗಳಿಂದ ಬಸ್ ತಂಗುದಾಣವಿಲ್ಲದೆ ಶಾಲಾ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳು ಹಾಗೂ ಕೆಲಸ ಕಾರ್ಯಕ್ಕೆ ತೆರಳುವ ಮಂದಿ ರಸ್ತೆ ಬದಿ ಬಸ್ ಗಾಗಿ ಕಾಯುತ್ತಿದ್ದರು.ಕೆಲ ಸಂದರ್ಭದಲ್ಲಿ ಜೋರಾಗಿ ಬೀಸುವ ಗಾಳಿ ಸಹಿತ ಮಳೆಯಿಂದ ರಕ್ಷಿಸಿಕೊಳ್ಳಲು ಸಮೀಪದಲ್ಲಿರುವ ಅಂಗಡಿಗಳ ಆಶ್ರಯ ಪಡೆಯುತ್ತಿದ್ದರು. ಕೊನೆಗೂ ಶಾಸಕರು ಹಾಗೂ ಬಣಕಲ್ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಮುತುವರ್ಜಿ ವಹಿಸಿ ಬಸ್ ತಂಗು ದಾಣ ವನ್ನು ನಿರ್ಮಿಸಿರುವುದರಿಂದ ಸುತ್ತಮುತ್ತಲಿನ ಗ್ರಾಮದ ಪ್ರಯಾಣಿಕರು ಹಾಗೂ ಶಾಲಾ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಬಸ್ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದ ಶಾಸಕಿ ನಯನ ಮೋಟಮರವರು ಪ್ರಯಾಣಿಕರಿಗೆ ಅನುಕೂಲ ವಾಗಲೆಂದು ಈ ತಂಗುದಾಣವನ್ನು ನಿರ್ಮಾಣ ಮಾಡಲಾಗಿದೆ ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು. ಅದೇ ರೀತಿ ಸಂಬಂಧ ಪಟ್ಟವರು ಈ ತಂಗುದಾಣದಲ್ಲಿ ಶುಚಿತ್ವ ಕಾಪಾಡುವುದರೊಂದಿಗೆ ಜನಸಾಮಾನ್ಯರಿಗೆ ಇಲ್ಲಿರಲು ಪೂರಕವಾದ ವಾತಾವರಣ ನಿರ್ಮಿಸುವ ಬಗ್ಗೆ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಝರಿನ ಉಪಾಧ್ಯಕ್ಷರಾದ ಬಿ.ಬಿ. ಲೀಲಾವತಿ. ಪಿ.ಡಿ.ಓ ಕೃಷ್ಣಪ್ಪ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.
ವರದಿ ✍️ಸೂರಿ ಬಣಕಲ್