ಬಣಕಲ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಸೇವಾ ನಿವೃತ್ತಿಯಾಗಿರುವ ಶಿಕ್ಷಕಿ ಹಾಜಿರಾ ಖಾತುನ್ ಅವರಿಗೆ ಶಾಲೆಯ ವತಿಯಿಂದ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶಾಲಾ ಆವರಣ ವಿದ್ಯಾರ್ಥಿಗಳ ನಗು, ಶಿಕ್ಷಕರ ಕಣ್ಣೀರು ಮತ್ತು ಪೋಷಕರ ಹೃದಯಸ್ಪರ್ಶಿ ಸನ್ಮಾನ ನಡೆಯಿತು.
ಶಾಲಾ ಮುಖ್ಯ ಶಿಕ್ಷಕಿ ರೇಷ್ಮಾ ಮಾತನಾಡಿ,
‘ಶಿಕ್ಷಕಿ ಹಾಜಿರಾ ಅವರು ಕಳೆದ ಒಂಬತ್ತು ವರ್ಷಗಳಲ್ಲಿ ನಿಷ್ಠೆ, ಶ್ರದ್ಧೆ ಹಾಗೂ ಸೇವಾಭಾವದಿಂದ ಅನೇಕ ಮಕ್ಕಳ ಭವಿಷ್ಯ ರೂಪಿಸಲು ಶ್ರಮಿಸಿದ್ದಾರೆ. ಇಂತಹ ಶಿಕ್ಷಕರು ಶಾಲೆಯ ಪ್ರೇರಣೆಯ ಶಕ್ತಿಯಾಗಿ ಉಳಿಯುತ್ತಾರೆ’ಎಂದರು.
ಶಾಲೆಯ ಶಿಕ್ಷಕಿ ಸೆಲಿನ ಅವರು ಸಹ ಅನಿಸಿಕೆ ಹಂಚಿಕೊಂಡರು.
ಹಾಜಿರಾ ಮೇಡಂ ಎಲ್ಲರೊಂದಿಗೆ ಸ್ನೇಹಪೂರಿತವಾಗಿ ನಡೆದು, ಎಲ್ಲ ಕೆಲಸಗಳಲ್ಲೂ ತೊಡಗಿಕೊಂಡು ನಮಗೂ ಪ್ರೇರಣೆ ನೀಡಿದ್ದಾರೆ. ಅವರು ಶಿಕ್ಷಕರು ಮಾತ್ರವಲ್ಲದೇ ನಮಗೆ ಮಾರ್ಗದರ್ಶಿಯೂ ಆಗಿದ್ದರು’ಎಂದರು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮೊಹಮ್ಮದ್ ಇದ್ರೀಸ್ ಮಾತನಾಡಿ
‘ಅವರು ನಿವೃತ್ತಿಯಾಗುತ್ತಿರುವುದು ನಮ್ಮ ಶಾಲೆಗೆ ತುಂಬಲಾರದ ನಷ್ಟವಾಗಿದೆ. ಆದರೆ ನಿವೃತ್ತಿ ಅನಿವಾರ್ಯವಾಗಿದೆ.ಅವರ ಸೇವೆ, ಸಹಾನುಭೂತಿ ಮತ್ತು ಶಿಸ್ತಿನಿಂದ ಶಾಲೆಯ ಹಿರಿಮೆ ಹೆಚ್ಚಾಗಿತ್ತು. ಇಂತಹ ಶಿಕ್ಷಕರು ಮನಸ್ಸಿನಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತಾರೆ’ಎಂದರು.
ನಿವೃತ ಶಿಕ್ಷಕಿ ಹಾಜಿರಾ ಮಾತನಾಡಿ’ವಿದ್ಯಾರ್ಥಿಗಳು ಕಲಿತ ಶಾಲೆ ಹಾಗೂ ಶಿಕ್ಷಕರನ್ನು ಮರೆಯಬಾರದು’ಎಂದರು. ಕಾರ್ಯಕ್ರಮದ ಕೊನೆಗೆ ಉರ್ದು ಟೀಚರ್ಸ್ ಅಶೋಸಿಯೇಶನ್ ಅಧ್ಯಕ್ಷ ಅಸ್ಘರ್ ಆಲಿ ಕಾರ್ಯಕ್ರಮದ ಎಲ್ಲ ಪಾಲುಗಾರರಿಗೆ ಧನ್ಯವಾದ ಸಲ್ಲಿಸಿದರು.
ಸನ್ಮಾನದ ಕ್ಷಣದಲ್ಲಿ ಶಾಲೆಯ ಶಿಕ್ಷಕಿಯರು, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.