ನಾಡಿನಾದ್ಯಂತ ಕಿಸ್ಮಸ್ ಹಬ್ಬದ ಸಂಭ್ರಮ ಜೋರಾಗಿದೆ. ಯೇಸುಕ್ರಿಸ್ತ ಹುಟ್ಟಿದ ಈ ದಿನವನ್ನು ಕ್ರೈಸ್ತ ಸಮುದಾಯದ ಜನರು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಕೋವಿಡ್ ಕಾರಣದಿಂದಾಗಿ ಕ್ರಿಸ್ಮಸ್ ವಿಶೇಷ ಪ್ರಾರ್ಥನೆ ವೇಳೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗುತ್ತಿದೆ.
ಯೇಸುಕ್ರಿಸ್ತನು ಮೇರಿ ಹಾಗೂ ಜೋಸೆಫರ ಮಗನಾಗಿ ಈ ದಿನದಂದು ಹುಟ್ಟಿದ ಎಂಬುವುದು ಕ್ರೈಸ್ತರ ನಂಬಿಕೆಯಾಗಿದೆ. ಈ ದಿನದಂದು ಕ್ರೈಸ್ತ ಸಮುದಾಯದವರು ತಮ್ಮ ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳನ್ನಿಡುತ್ತಾರೆ, ಅಲ್ಲದೆ ಕ್ರಿಸ್ಮಸ್ ವೃಕ್ಷವಿಟ್ಟು ಅಲಂಕರಿಸುತ್ತಾರೆ, ಅಷ್ಟೇ ಅಲ್ಲದೆ ಕ್ರಿಸ್ಮಸ್ಸಿಗೆಂದೇ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುತ್ತಾರೆ.
ಬಣಕಲ್ ನಲ್ಲಿ ಕ್ರೈಸ್ತ ಭಾಂದವರು ಶನಿವಾರದಂದು ಯೇಸು ಕ್ರಿಸ್ತನ ಜನ್ಮದಿನದ ಪ್ರಯುಕ್ತ ಕ್ರಿಸ್‌ಮಸ್ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.
ಶನಿವಾರ ಬೆಳಿಗ್ಗೆಯಿಂದಲೇ ಬಣಕಲ್ ಚರ್ಚ್‌ಗೆ ಕುಟುಂಬ ಸಮೇತ ತೆರಳಿದ ಕ್ರೈಸ್ತರು, ಯೇಸು ಕ್ರಿಸ್ತನ ಶಿಲುಬೆ ಮುಂದೆ ನಿಂತು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ ದರು. ಧರ್ಮಗುರುಗಳ ಸಮ್ಮುಖದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಎರಡು ದಿನದ ಮುಂಚಿತವಾಗಿ ಚರ್ಚ್ ಗೆ ದೀಪಾಲಂಕಾರದಿಂದ ಶೃಂಗರಿಸಲಾಗಿತ್ತು.ಆವರಣದ ಸುತ್ತಮುತ್ತಲಿನ ಪ್ರದೇಶ ದೀಪಾಲಂಕಾರದಿಂದ ಜಗಮಗಿಸುತಿತ್ತು ಶುಕ್ರವಾರ ರಾತ್ರಿಯೇ ಚರ್ಚ್ ಆವರಣದಲ್ಲಿ ನಿರ್ಮಿ ಸಿರುವ ಕಣ್ಮನ ಸೆಳೆಯುವ ಗೋದಲಿಯ ದೀಪಾಲಂಕಾರ ವೀಕ್ಷಿಸಲು ಜನರು ಆಗಮಿಸುತ್ತಿದ್ದುದು ಕಂಡುಬಂತು.
ಪುಟಾಣಿ ಮಕ್ಕಳು, ಯುವಕ, ಯುವತಿಯರು ಹೊಸ ಬಟ್ಟೆ ಧರಿಸಿ, ಚರ್ಚ್‌ಗಳಿಗೆ ಆಗಮಿಸಿದ್ದರು.
ಚರ್ಚ್ ಆವರಣದಲ್ಲಿ ನಿರ್ಮಿಸಿರುವ ಬಾಲ ಯೇಸುವಿನ ಜನ್ಮ ವೃತ್ತಾಂತ ಸಾರುವ ಗೋದಲಿ ಎಲ್ಲರ ಗಮನ ಸೆಳೆಯಿತು. ಕ್ರೈಸ್ತರ ಮನೆ ಮನೆಗಳಲ್ಲಿ ಬಾಲ ಯೇಸುವಿನ ಜನ್ಮ ವೃತ್ತಾಂತ ಸಾರುವ ಗೋದಲಿ ನಿರ್ಮಿಸಿ, ವಿದ್ಯುತ್ ದೀಪಾಲಂಕಾರ ಮಾಡಿದ್ದರು. ಪ್ರತಿ ಮನೆಯಲ್ಲಿ ಹಬ್ಬದ ಸಂಭ್ರಮ ತುಂಬಿತುಳುಕುತ್ತಿತ್ತು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ