ಗ್ರಾ.ಪಂ. ಚುನಾವಣೆ:ಗರಿಗೆದರಿದ ಹಳ್ಳಿ ರಾಜಕೀಯ

ಬಣಕಲ್ :ರಾಜ್ಯ ಚುನಾವಣಾ ಆಯೋಗವು ಮಾರ್ಚ್ ತಿಂಗಳವರೆಗೆ ಅವಧಿ ಮುಕ್ತಾಯವಾಗುವ ಗ್ರಾಮ ಪಂಚಾಯತ್ ಗಳಿಗೆ ಡಿ.27ರಂದೆ ಚುನಾವಣೆ ಘೋಷಿಸಿದ ಹಿನ್ನಲೆಯಲ್ಲಿ ಈಗ ಗ್ರಾಮೀಣ ಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯ್ತಿ ಚುನಾವಣೆಗೆ ಮೂಡಿಗೆರೆ ತಾಲ್ಲೂಕ್ಕಿನ ಬಣಕಲ್ ನಲ್ಲಿ ಭರ್ಜರಿ ತಯಾರಿ ನಡೆದಿದೆ.ಬಣಕಲ್ (1)ಬಣಕಲ್(2) ಕ್ಷೇತ್ರದಲ್ಲಿ ಸತತ ಗೆಲುವಿನ ಜೋಶ್‍ನಲ್ಲಿರುವ ಬಿಜೆಪಿ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲುವಿನ ನಾಗಾಲೋಟ ಮುಂದುವರೆಸಲು ರಣತಂತ್ರ ರೂಪಿಸಿದೆ.
ಕೂಡಹಳ್ಳಿ ಕ್ಷೇತ್ರದಲ್ಲಿ ಸತತವಾಗಿ ಸೋಲನ್ನೇ ಕಾಣದೆ ಸೋಲಿಲ್ಲದ ಸರದಾರನಾಗಿ ಗೆಲುವಿನ ಜೋಶ್ ನಲ್ಲಿರುವ ಕಾಂಗ್ರೆಸ್ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚು ಗೆಲ್ಲಿಸಿಕೊಳ್ಳಲು ಪ್ರತಿತಂತ್ರ ಹೆಣೆದಿದೆ. ಜೆಡಿಎಸ್ ಪಕ್ಷ ಕೂಡ ಹೊಸ ಹುರುಪಿನೊಂದಿಗೆ ಗ್ರಾಮ ಪಂಚಾಯತಿ ಚುನಾವಣಾ ಕಣಕ್ಕಿಳಿದು ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿ ತಮ್ಮ ಅಸ್ತಿತ್ವವನ್ನು ಪ್ರತಿಪಾದಿಸಲು ರೂಪು ರೇಷೆಗಳನ್ನು ಸಿದ್ದಪಡಿಸಿದೆ ಹೆಗ್ಗುಡ್ಲು ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಯಲ್ಲಿ ಜಿದ್ದಾ ಜಿದ್ದಿನ ಹೋರಾಟ ನಡೆಯುತ್ತಾ ಬಂದಿದೆ. ಆದರೆ ಈ ವರ್ಷ ಬದಲಾವಣೆಯ ಬಿರುಗಾಳಿ ಬೀಸುತ್ತದೆ ಎಂಬುದು ಮತದಾರ ಲೆಕ್ಕಾಚಾರ.
ಪಕ್ಷ ರಹಿತ ಚುನಾವಣೆ ವ್ಯವಸ್ಥೆಯಾದರೂ ಕೂಡ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳದ್ದೇ ದರ್ಬಾರು ಹೆಚ್ಚಾಗಿ ನಡೆಯುವುದರಿಂದ ಯಾವುದೇ ಲೋಕಸಭೆ, ವಿಧಾನಸಭೆ ಚುನಾವಣೆಗೆ ಕಮ್ಮಿ ಇಲ್ಲದಂತೆ ಗ್ರಾಮಪಂಚಾಯತಿ ಚುನಾವಣೆಗಳು ನಡೆಯುತ್ತವೆ. ಹೀಗಾಗಿ ಹಳ್ಳಿ ಹಳ್ಳಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಚುನಾವಣೆಯದ್ದೇ ಮಾತು.
ಡಿ. 27ರಂದು ಚುನಾವಣೆ ನಡೆಸಲು ಚುನಾವಣಾ ಆಯೋಗ ದಿನಾಂಕ ಘೋಷಿಸಿದ್ದು ಈಗಾಗಲೇ ಗ್ರಾಮ ಪಂಚಾಯತಿ ಚುನಾವಣಾ ಆಕಾಂಕ್ಷಿಗಳು ಕಣಕ್ಕಿಳಿಯಲು ತಮ್ಮ ನಾಯಕರ ಬಳಿ ಎಡತಾಕುತ್ತಿದ್ದಾರೆ.
ರಾಜಕೀಯ ಪಕ್ಷಗಳ ಮುಖಂಡರು ಹೋಬಳಿ ಮಟ್ಟಗಳಲ್ಲಿ ಸಭೆಗಳನ್ನು ನಡೆಸಿ ಸ್ತ್ರೀ ಶಕ್ತಿ ಸಂಘ, ವಿವಿಧ ಸಂಘಟನೆಗಳು, ಸಮುದಾಯದ ಮುಖಂಡರುಗಳನ್ನು ತಮ್ಮತ್ತ ಸೆಳೆದು ತಮ್ಮ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ತಂತ್ರಗಳನ್ನು ಹೆಣೆದಿದ್ದಾರೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಚುನಾವಣೆ ಎದುರಾಗಿದೆ. ನಗರ ಪ್ರದೇಶಗಳಲ್ಲಿ ವಾಸವಾಗಿದ್ದ ಬಹುತೇಕರು ಕಳೆದ ಏಳೆಂಟು ತಿಂಗಳುಗಳಿಂದ ಹಳ್ಳಿಗಳಿಗೆ ತೆರಳಿ ನೆಲೆಸಿದ್ದಾರೆ.
ಇಂತಹವರಲ್ಲಿ ಬಹುತೇಕರು ಈಗ ಗ್ರಾಮ ಪಂಚಾಯತಿ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಚುನಾವಣೆಗೆ ನಿಲ್ಲಲು, ಗೆಲ್ಲಲು ಯೋಜನೆಗಳನ್ನು ಹೆಣೆದಿದ್ದು ರಾಜಕೀಯ ಪಕ್ಷಗಳ ನಾಯಕರ ಬೆಂಬಲ ಪಡೆಯಲು ಮುಂದಾಗಿದ್ದಾರೆ. ಮಾಮೂಲಿ ಚುನಾವಣೆಯಂತೆ ಪಂಚಾಯತಿ ಚುನಾವಣೆಯಲ್ಲೂ ಹಣದ ಹೊಳೆ ಹರಿಯುತ್ತದೆ. ರಾಜಕೀಯ ಪಕ್ಷಗಳ ನಾಯಕರು ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಲು ಪಂಚಾಯ್ತಿಗಳ ಅಧಿಕಾರ ಹಿಡಿಯಲು ಬೇಕಾದಂತೆ ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ.

ಈಗಾಗಲೇ ಪಂಚಾಯತಿ ಚುನಾವಣೆಯ ಬಿಸಿ ಏರಿದ್ದು ಪಂಚಾಯತಿಯಲ್ಲಿ ಯಾರು ಗೆದ್ದರೆ ಏನು ಲಾಭ. ನಮ್ಮ ಗ್ರಾಮ ಪಂಚಾಯತಿಗಳಿಗೆ ಯಾರಿಂದ ಏನು ಕೆಲಸವಾಗುತ್ತದೆ, ಚುನಾವಣೆಯಲ್ಲಿ ನಮಗೇನು ಲಾಭವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸ್ತ್ರೀ ಶಕ್ತಿ ಸಂಘಗಳು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿರುವ ಯುವಕರ ಸಂಘ, ವಿವಿಧ ಸಮುದಾಯಗಳು ದೇವಸ್ಥಾನ ಟ್ರಸ್ಟ್ ಗಳನ್ನು ಗುರಿಯಾಗಿಸಿಕೊಂಡು ಮತಗಳನ್ನು ಸೆಳೆಯುವುದು ಚುನಾವಣೆಯಲ್ಲಿ ಮಾಮೂಲಿ. ಅದೇ ರೀತಿ ಗ್ರಾಮ ಪಂಚಾಯತಿ ಚುನಾವಣೆಯಲ್ಲೂ ಕೂಡ ಮತ ಸೆಳೆಯುವ ತಂತ್ರ, ಪ್ರತಿತಂತ್ರವನ್ನು ತಮ್ಮ ಬೆಂಬಲಿತ ಅಭ್ಯರ್ಥಿಗಳ ಮೂಲಕ ರಾಜಕೀಯ ಪಕ್ಷಗಳ ನಾಯಕರು ಮಾಡುತ್ತಿದ್ದಾರೆ.
ಈಗಾಗಲೇ ಬಿಜೆಪಿ ರಾಜ್ಯದ ಬಹುತೇಕ ಕಡೆ ಗ್ರಾಮ ಸ್ವರಾಜ್ ಸಮಾವೇಶ ನಡೆಸುವ ಮೂಲಕ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಮುಂದಾಗಿದೆ. ಒಟ್ಟಾರೆ ಕಳೆದ ಐದು ವರ್ಷದಿಂದ ಗದ್ದಲವಿಲ್ಲದೆ ಸುಮ್ಮನಿದ್ದ ಹಳ್ಳಿಗಳಲ್ಲಿ ಚುನಾವಣಾ ಹಣಾಹಣಿ ರಂಗೇರತೊಡಗಿದೆ