ಅದೊಂದು ಕೂಗು ಉಳಿಸಿತು ಕಂದಮ್ಮನ ಜೀವ ಸ್ವತಃ ಮಗುವೇ ನೀಡಿತು ಪೊದೆಗೆ ಎಸೆದವರ ವಿಳಾಸ

ಚಿಕ್ಕಮಗಳೂರು: ಪೊದೆಯೊಳಗೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಹಸುಗೂಸನ್ನ ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿಳಗುಳ ಬಳಿ ನಡೆದಿದೆ. ಬಿಳಗುಳ ವಾಸಿ ಚಂದ್ರು ಎನ್ನುವವರು ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಪೊದೆಯೊಳಗಿನಿಂದ ಮಗು ಅಳುವ ಶಬ್ಧವನ್ನ ಕೇಳಿ ಮಗುವಿನ ರಕ್ಷಣೆ ಮಾಡಿದ್ದಾರೆ. ಮಗುವನ್ನ ಸುರಕ್ಷಿತವಾಗಿ ರಕ್ಷಣೆ ಮಾಡಿ, ಸಮೀಪದಲ್ಲಿರುವ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಮೂಡಿಗೆರೆ ಆಸ್ಪತ್ರೆಯಲ್ಲಿ ಗಂಡು ಮಗುವಿನ ಆರೈಕೆ ಮಾಡಲಾಗ್ತಿದ್ದು, ದೊಡ್ಡ ಗಂಡಾಂತರದಿಂದ ಮುದ್ದು ಕಂದಮ್ಮ ಪಾರಾಗಿದೆ.

ಮುದ್ದು ಕಂದಮ್ಮನೇ ನೀಡಿತ್ತು ಎಸೆದು ಹೋದವರ ವಿಳಾಸ!
ಮುದ್ದು ಮಗುವನ್ನ ನೋಡಿ ಎಲ್ಲರೂ ಅಯ್ಯೋ.. ಪಾಪ.. ಈ ಮಗುವನ್ನ ಎಸೆದು ಹೋಗಲು ಹೆತ್ತ ತಾಯಿಗೆ ಮನಸ್ಸಾದ್ರೂ ಹೇಗೆ ಬಂತು ಅಂತಾ ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಅನೇಕರು ನಮಗಾದ್ರೂ ಕೊಟ್ಟಿದ್ರೆ ಸಾಕಿ ಕೊಳ್ಳುತ್ತಾ ಇದ್ವಿ.. ಈ ರೀತಿ ಮಾಡೋದಾ ಅಂತಾ ಮಗುವನ್ನು ಎಸೆದವರಿಗೆ ಹಿಡಿಶಾಪ ಹಾಕಿದ್ದಾರೆ. ಈ ಮಧ್ಯೆ ಮಗು ಯಾರದ್ದು ಅನ್ನೋದರ ಸುಳಿವನ್ನ ಸ್ವತಃ ಆ ಮಗುವೇ ನೀಡಿದೆ. ಹೌದು, ಮಗುವಿನ ಕೈಗೆ ಕಟ್ಟಿದ ಗುರುತಿನ ಚೀಟಿ ಹಾಗೆ ಇದ್ದು, ಅದರಲ್ಲಿ ಮಗುವಿನ ತಾಯಿ ಯಾರು, ತಂದೆ ಯಾರು.. ಎಲ್ಲಿಯವರು ಅನ್ನೋ ವಿಳಾಸ ಗೊತ್ತಾಗಿದೆ. ಮಗುವಿನ ಕೈಯಲ್ಲಿದ್ದ ಗುರುತಿನ ಚೀಟಿಯಿಂದ ಸುಲಭವಾಗಿ ಪೋಷಕರನ್ನ ಗುರುತಿಸಲು ಸಾಧ್ಯವಾಗಿದೆ.

ಮಗುವನ್ನ ಸಾಕಲು ಕಷ್ಟ ಎಂದು ಎಸೆದು ಹೋದರು
ಪೊದೆಯೊಳಗೆ ಬಿದ್ದು ನರಳಾಟ ನಡೆಸುತ್ತಿದ್ದ ಮಗುವನ್ನು ಎಸೆದವರು ಯಾರೆಂದು ಪತ್ತೆಯಾಗಿದೆ. ಮೂಡಿಗೆರೆ ತಾಲೂಕಿನ ಗ್ರಾಮವೊಂದರ 25 ವರ್ಷದ ವ್ಯಕ್ತಿಗೆ ಇಬ್ಬರು ಪತ್ನಿಯರಿದ್ದು(ಅಕ್ಕ-ತಂಗಿಯನ್ನ ಮದುವೆಯಾಗಿದ್ದಾರೆ), ಇಬ್ಬರಿಗೂ ಕೂಡ ಒಂದೊಂದು ಗಂಡು ಮಗು ಇದೆ. ಅಕ್ಕ-ತಂಗಿಯರನ್ನ ವರಿಸಿದ್ದ ಆತ, ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮೊದಲ ಪತ್ನಿಗೆ 3 ವರ್ಷದ ಗಂಡು ಮಗುವಿದ್ದು, ಎರಡನೇ ಪತ್ನಿಗೆ ಎರಡು ವರ್ಷದ ಗಂಡು ಮಗುವಿದೆ. ಇದೀಗ ಮತ್ತೆ ಎರಡನೇ ಪತ್ನಿ 12 ದಿನದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದ್ರೆ ನಿನ್ನೆ ಆಸ್ಪತ್ರೆಗೆ ಮಗುವನ್ನ ಕರೆದುಕೊಂಡು ಬಂದಿದ್ದ ದಂಪತಿ, ಮಗುವನ್ನ ಬಿಳಗುಳ ಸಮೀಪದ ಪೊದೆಯೊಂದರಲ್ಲಿ ಬಿಸಾಕಿ ಊರಿಗೆ ಹೋಗಿದ್ದಾರೆ. ಅಕ್ಕಪಕ್ಕದ ಮನೆಯವರಿಗೆ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿತು ಅಂತಾ ತಿಳಿಸಿದ್ದಾರೆ. ಸಂಜೆ ಮಗು ಸಿಕ್ಕ ಬಳಿಕ ವಿಚಾರಣೆ ಮಾಡಿದಾಗ, ಈಗಾಗಲೇ ಇಬ್ಬರು ಮಕ್ಕಳಿದ್ದು ಮಗು ಸಾಕಲು ಕಷ್ಟ ಆಗುತ್ತದೆ ಎಂದು ಎಸೆದು ಬಂದಿರುವುದಾಗಿ ಹೇಳಿಕೆ ನೀಡಿದ್ದಾರೆ.

ಏನೇ ಕಷ್ಟವಿರಲಿ ಮನುಷ್ಯತ್ವ ಮರೆಯದಿರಿ
ಅದು ಎಂತದ್ದೇ ಕಷ್ಟ ಇರಬಹುದು, ಬೇರೆ ಏನೋ ಸಮಸ್ಯೆ ಇರಬಹುದು.. ಹಾಗಂತ ಒಂದು ಹಸುಗೂಸನ್ನ ಈ ರೀತಿ ಕಾಡಿಗೆ ಎಸೆಯುವುದು ಎಷ್ಟು ಕ್ರೂರತನ ಅಲ್ವಾ..? ಮೂಡಿಗೆರೆ ಸುತ್ತಮುತ್ತ ಬೀದಿನಾಯಿಗಳ ಹಾವಳಿ ಅಂತೂ ತುಂಬಾನೆ ಜಾಸ್ತಿಯಿದೆ. ಒಂದು ವೇಳೆ ಈ ಮಗು ಯಾವುದಾದ್ರೂ ಬೀದಿನಾಯಿಗಳಿಗೆ ಕಾಣಿಸಿದ್ರೆ ಆಗುತ್ತಿದ್ದ ಅನಾಹುತವನ್ನ ಊಹಿಸಿಕೊಳ್ಳೋಕೆ ಕೂಡ ಮನಸ್ಸು ಒಪ್ಪುವುದಿಲ್ಲ. ಅದೆಷ್ಟೋ ಮಹಿಳೆಯರು ಮದುವೆಯಾದ್ರೂ ಕೂಡ ಮಕ್ಕಳು ಆಗದ ಹಿನ್ನೆಲೆ ಪಡುತ್ತಿರುವ ಪಡಿಪಾಟಲು ನೋಡಿದ್ರೆ ನಿಜಕ್ಕೂ ಬೇಸರ ಆಗುತ್ತದೆ. ಮಕ್ಕಳು ಸಾಕಲು ಆಗದಿದ್ರೆ ಕಾನೂನು ಬದ್ದವಾಗಿ ಬೇರೆಯವರಿಗೆ ನೀಡಲು ಅವಕಾಶಗಳಿವೆ. ಅದನ್ನ ಬಿಟ್ಟು ಈ ರೀತಿ ಏನೂ ಅರಿಯದ ಹಾಲುಗಲ್ಲದ ಮುದ್ದು ಕಂದಮ್ಮನನ್ನ ಮಗುವನ್ನ ಈ ರೀತಿ ಪೊದೆಯಲ್ಲಿ ಎಸೆದು ಬರಲು ಮನಸ್ಸಾದ್ರೂ ಹೇಗೆ ಬಂತು? ಎಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ.

Sahifa Theme License is not validated, Go to the theme options page to validate the license, You need a single license for each domain name.