ಬಣಕಲ್, ಕೊಟ್ಟಿಗೆಹಾರದಲ್ಲಿ ಹಿರಿಯರ ದಿನಾಚರಣೆ, ‘ ಹಿರಿಯರ ಮಾರ್ಗದರ್ಶನವೆ ನಮಗೆ ದಾರಿ ದೀಪ ‘: ಫಾ.ಪ್ರೇಮ್ ಲಾರೆನ್ಸ್ ಡಿಸೋಜ

ಬಣಕಲ್ : ಭಾನುವಾರದಂದು ಬಣಕಲ್ ಬಾಲಿಕಾ ಮರಿಯ ಚರ್ಚಿನಲ್ಲಿ ಹಿರಿಯರ ದಿನಾಚರಣೆ ಆಚರಿಸಲಾಯಿತು. 35 ಹಿರಿಯರಿಗೆ ಸ್ತ್ರೀ ಸಂಘಟನೆ ವತಿಯಿಂದ ಉಡುಗೊರೆ ನೀಡಿ ಗೌರವಿಸಲಾಯಿತು.ದರ್ಮಗುರು ಫಾ.ಪ್ರೇಮ್ ಲಾರೆನ್ಸ್ ಡಿಸೋಜ ಮಾತನಾಡಿ’ಹಿರಿಯರನ್ನು ಕಸದಂತೆ ಕಾಣಬಾರದು. ಅವರ ತ್ಯಾಗ ಪ್ರೀತಿಯಿಂದ ನಾವು ಉತ್ತಮ ಶಿಕ್ಷಣ ಕಲಿತಿದ್ದೇವೆ.ಅವರ ಮಾರ್ಗದರ್ಶನವೇ ನಮ್ಮ ಜೀವನಕ್ಕೆ ದೀಪವಾಗಬೇಕು’ಎಂದರು.ಫಾ.ಥೋಮಸ್ ಕಲಘಟಗಿ ಅವರು ಹಿರಿಯರ ಬಗ್ಗೆ ಉತ್ತಮ ಪ್ರಬೋಧನೆ ನೀಡಿದರು.

ಮನೆಯ ಹಿರಿಯರು ಕುಟುಂಬದ ಆಸ್ತಿಯಾಗಿದ್ದಾರೆ. ಅವರ ಸಂಸ್ಕಾರದಿಂದ ನಾವು ಜೀವನದಲ್ಲಿ ದೈವಭಕ್ತಿಯಿಂದ ಬೆಳೆಯಲು ಸಾಧ್ಯವಾಗಿದೆ’ಎಂದು ಫಾ.ವಿಲಿಯಂ ಬರ್ನಾರ್ಡ್ ಹೇಳಿದರು.

ಕೊಟ್ಟಿಗೆಹಾರದ ಯೇಸುವಿನ ಪವಿತ್ರ ಹೃದಯದ ದೇವಾಲಯ, ಜಾವಳಿ ಚರ್ಚ್ ಹಾಗೂ ಬಾಳೂರು ಚರ್ಚಿನಲ್ಲಿ ಹಿರಿಯರ ದಿನಾಚರಣೆ ಸಂಭ್ರಮದ ಪೂಜೆ ನೆರವೇರಿಸಿ ಮಾತನಾಡಿ’ನಾವು ಆಧುನಿಕ ತಂತ್ರಜ್ಞಾನದಲ್ಲಿ ಮುಂದೆ ಸಾಗುತ್ತಿದ್ದೇವೆ. ಸಮಾಜದಲ್ಲಿ ಹಿರಿಯರನ್ನು ಕಡೆಗಣಿಸಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ.ಹಲವು ಹಿರಿಯರು ಮಕ್ಕಳಿಂದ ದೂರವಿದ್ದು ಆಶ್ರಮದ ಬದುಕು ಸಾಗಿಸುತ್ತಿದ್ದಾರೆ.ನಾವು ಕುಟುಂಬದಲ್ಲಿ ತಂದೆ,ತಾಯಿ,ಅಜ್ಜ,ಅಜ್ಜಿಯರನ್ನು ಗೌರವಿಸಿ ಅವರಿಗೆ ಸ್ವಲ್ಪ ಸಮಯ ನೀಡುವ ಅಗತ್ಯವಿದೆ. ಅವರ ಸಂಸ್ಕಾರದಿಂದ ನಾವು ಬೆಳೆದಿದ್ದೇವೆ.ದೈವಭಕ್ತಿಯನ್ನು ಗೌರವ ನೀಡುವ ಗುಣಗಳನ್ನು ಕಲಿಸಿದ್ದಾರೆ. ಆದರೆ ನಾವು ಸನ್ಮಾರ್ಗದಲ್ಲಿ ನಡೆಯದೇ ಸಮಾಜದಲ್ಲಿ ಅವರಿಗೆ ಸ್ಥಾನ ಮಾನ ನೀಡದೇ ಕಡೆಗಣಿಸುವಂತಾಗಿದೆ. ಎಲ್ಲರು ಹಿರಿಯರಿಗೆ ಗೌರವ ಕೊಟ್ಟು ಉತ್ತಮ ಸಮಾಜ ನಿರ್ಮಿಸುವ ಅಗತ್ಯವಿದೆ. ಅವರ ಆರೈಕೆ ನಮ್ಮ ಕರ್ತವ್ಯವಾಗಬೇಕು’ಇದು ಒಂದೇ ದಿನದ ಆಚರಣೆಯಾಗಬಾರದು’ ಎಂದರು.

ಕೊಟ್ಟಿಗೆಹಾರ,ಬಾಳೂರು,ಜಾವಳಿ ಸೇರಿದಂತೆ 50 ಮಂದಿ ಹಿರಿಯರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.ಮಕ್ಕಳು ಕುಟುಂಬದ ಹಿರಿಯರಿಗೆ ಉಡುಗೊರೆಗಳನ್ನು ಕೊಟ್ಟು ಆಶೀರ್ವಾದ ಪಡೆದುಕೊಂಡರು.ಫಾ.ವಿಲಿಯಂ ಬರ್ನಾರ್ಡ್ ಅವರ ನಾಲ್ಕನೆ ವರ್ಷದ ಯಾಜಕತ್ವದ ನೆನಪಿಗಾಗಿ ಅವರನ್ನು ಕ್ರೈಸ್ತ ಭಕ್ತಾಧಿಗಳು,ಐಸಿವೈಎಂ ಯುವ ಸಂಘಟನೆಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕ್ರೈಸ್ತ ಭಕ್ತಾಧಿಗಳು ಭಾಗವಹಿಸಿದ್ದರು.