ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು: ಪಶ್ಚಿಮ ಘಟ್ಟಗಳ ನಿಷೇಧಿತ ಅರಣ್ಯ ಪ್ರದೇಶವಾದ ಬಿದಿರುತಳದ ಅರಣ್ಯದಲ್ಲಿ ಅನುಮತಿ ಇಲ್ಲದೆ ಟ್ರಕ್ಕಿಂಗ್ ನಡೆಸುತ್ತಿದ್ದ 103 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಮೂಲದ ಈ ಪ್ರವಾಸಿಗರು, ಟೂರಿಸ್ಟ್ ಪ್ಯಾಕೇಜ್ ಮೂಲಕ ಪ್ರಖ್ಯಾತ ಕಂಪನಿಯ ಉದ್ಯೋಗಿಗಳಾಗಿ ಬಂದಿದ್ದವರು. ಇವರನ್ನು ಸ್ಥಳೀಯರೊಬ್ಬರು ನಿಷೇಧಿತ ಪ್ರದೇಶಕ್ಕೆ ಟ್ರಕ್ಕಿಂಗ್ಗೆ ಕರೆದುಕೊಂಡು ಹೋಗಿದ್ದರು ಎಂದು ತಿಳಿದು ಬಂದಿದೆ.
ಚಾರ್ಮಾಡಿ ಘಾಟಿಯ ಬಣಕಲ್ ಹಾಗೂ ಬಾಳೂರು ಪೊಲೀಸ್ ಠಾಣೆಗಳ ಸಂಯುಕ್ತ ಕಾರ್ಯಾಚರಣೆ ಮೂಲಕ ಈ ದಾಳಿ ನಡೆಯಿತು. ಬಣಕಲ್ ಪಿ.ಎಸ್.ಐ. ರೇಣುಕಾ ಮತ್ತು ಬಾಳೂರು ಪಿ.ಎಸ್.ಐ. ದಿಲೀಪ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಪ್ರವಾಸಿಗರನ್ನು ವಶಕ್ಕೆ ಪಡೆಯಲಾಯಿತು.
ಪೊಲೀಸರು ಸ್ಥಳದಲ್ಲಿ ಇದ್ದ ಎರಡು ಬಸ್ಸುಗಳು ಮತ್ತು ಎರಡು ಪಿಕಪ್ ವಾಹನಗಳನ್ನೂ ವಶಕ್ಕೆ ಪಡೆದಿದ್ದಾರೆ. ಘಟನೆ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.