ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ನರ್ಸ್ ಬ್ರೈನ್ ಡೆಡ್

: ಅಂಗಾಂಗ ದಾನದ ಮೂಲಕ ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು ಚಿಕ್ಕಮಗಳೂರು: ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಸಂದರ್ಭದಲ್ಲಿಯೇ ಕುಸಿದು ಬಿದ್ದಂತ ನರ್ಸ್ ಒಬ್ಬರ ಮೆದುಳು ನಿಷ್ಕ್ರೀಯಗೊಂಡಿತ್ತು. ಆಕೆಯ ಅಂಗಾಂಗವನ್ನು ದಾನ ಮಾಡುವ ಮೂಲಕ, ಮಗಳ ಸಾವಿನಲ್ಲಿಯೂ ಪೋಷಕರು ಸಾರ್ಥತೆಯನ್ನು ಮೆರೆದಿರೋ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಕಟ್ಟಿಮನೆ-ಹೊಸಕೊಪ್ಪದ ಕೃಷ್ಣಮೂರ್ತಿ ಹಾಗೂ ಲೀಲಾವತಿ ದಂಪತಿಗಳ ಪುತ್ರಿ ಗಾನವಿ ಗೌಡ ( 22), ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಫೆಬ್ರವರಿ 8ರಂದು ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದಿದ್ದರು. ಅವರು ಕರ್ತವ್ಯ ನಿರ್ವಹಿಸುತ್ತಿದ್ದಂತ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆದುಳು ಶಸ್ತ್ರ ಚಿಕಿತ್ಸೆ ನಡೆಸಿದರೂ, ಯಶಸ್ವಿಯಾಗಿರಲಿಲ್ಲ. ಹೀಗಾಗಿ ಯುವತಿ ಬದುಕೋದು ಕಷ್ಟ ಎಂಬುದಾಗಿ ಪೋಷಕರಿಗೆ ವೈದ್ಯರು ಸಲಹೆ ಮಾಡಿದ್ದರು. ಜೊತೆಗೆ ಅಂಗಾಂಗ ದಾನಕ್ಕೂ ಮನವೊಲಿಸಿದರು. ಮಗಳ ಸಾವಿನಲ್ಲಿಯೂ ಪೋಷಕರು ಗಾನವಿಯ ಅಂಗಾಂಗ ದಾನ ಮಾಡಿದ್ದಾರೆ. ಆಕೆಯ ಹೃದಯ, ಕಣ್ಣು, ಕಿಡ್ನಿ, ಲಿವರ್ ಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ರೋಗಿಗಳಿಗೆ ದಾನ ಮಾಡಿದ್ದರಿಂದಾಗಿ, ಸಾವಿನಲ್ಲಿಯೂ ಸಾರ್ಥಕತೆಯನ್ನು ಮೆರೆಯುವಂತೆ ಆಗಿದೆ.
ಅಂದಹಾಗೇ ಗಾನವಿ ಗೌಡ ಸಹೋದರಿಯ ಮದುವೆ ಇದೇ ಫೆ.20ರಂದು ನಿಗದಿಯಾಗಿತ್ತು. ಆದ್ರೇ ಗಾನವಿ ನಿಧನದ ಕಾರಣದಿಂದಾಗಿ, ಮದುವೆ ಸಂಭ್ರಮದಲ್ಲಿದ್ದಂತ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. ನಿನ್ನೆ ಮಧ್ಯಾಹ್ನ ಗಾನವಿ ಮೃತದೇಹದ ಅಂತ್ಯಕ್ರಿಯೆ ಹೊಸಕೊಪ್ಪದಲ್ಲಿ ನೆರವೇರಿಸಲಾಯಿತು
ಈ ಬಗ್ಗೆ ಟ್ವಿಟ್ ಮಾಡಿರುವಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಆಸ್ಪತ್ರೆಯಲ್ಲಿ ರೋಗಿಗಳ ಸೇವೆ ಮಾಡುತ್ತಾ ಸಾವಿರಾರು ರೋಗಿಗಳನ್ನು ಗುಣಮುಖರನ್ನಾಗಿ ಮಾಡಿದ್ದ ಸ್ಟಾಫ್ ನರ್ಸ್ ಗಾನವಿ ಮರಣದ ನಂತ್ರವೂ ಅಂಗಾಂಗ ದಾನ ಮಾಡಿ, ಸಾರ್ಥಕತೆ ಮೆರೆದಿದ್ದಾರೆ. ಮಗಳ ಸಾವಿನ ದುರಂತದ ನಡುವೆಯೂ ಕುಟುಂಬಸ್ಥರು ಅಂಗಾಂಗ ದಾನ ಮಾಡಿರುವುದು ಪರೋಪಕಾರಾರ್ಥಂ ಯೋ ಜೀವತಿ ಸ ಜೀವತಿ ಎಂದಿದ್ದಾರೆ.

Sahifa Theme License is not validated, Go to the theme options page to validate the license, You need a single license for each domain name.