ಚಿಕ್ಕಮಗಳೂರು: ಯುವತಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ ಕಾರಣಕ್ಕೆ ಯುವಕರ ಗುಂಪೊಂದು ಜಿಲ್ಲೆಯ ಖ್ಯಾತ ಪರಿಸರವಾದಿ ಡಿ.ವಿ.ಗಿರೀಶ್ ಮತ್ತು ಅವರ ಸಂಗಡಿಗರಿದ್ದ ವಾಹನವನ್ನು ಅಡ್ಡಹಾಕಿ ಥಳಿಸಿರುವ ಘಟನೆ ಸೋಮವಾರ ಸಂಜೆ ತಾಲೂಕಿನ ಸಿರವಾಸೆ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ಹಲ್ಲೆಗೊಳಗಾದವರು ಎಂಟು ಮಂದಿ ಆರೋಪಿಗಳ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪರಿಸರವಾದಿ ಡಿ.ವಿ.ಗಿರೀಶ್ ಅವರು ಸೋಮವಾರ ಸಂಜೆ ತಮ್ಮ ಸಹಚರರಾದ ಶ್ರೀಪಾಲ್ ಜೈನ್, ದಿನೇಶ್, ಕೀರ್ತಿಕುಮಾರ್, ಜಬೀವುಲ್ಲಾ ಹಾಗೂ ದಿನೇಶ್ ಮಗಳು ಕರೀಷ್ಮಾ ಎಂಬವರೊಂದಿಗೆ ಕೆಮ್ಮಣ್ಣುಗುಂಡಿ ಸಮೀಪದಲ್ಲಿರುವ ಕ್ರೀಸ್ಟೋಫರ್ ಎಂಬವರ ಎಸ್ಟೇಟ್ಗೆ ಜಿಪ್ಸಿ ವಾಹನದಲ್ಲಿ ಹೋಗಿದ್ದರು. ಅಲ್ಲಿಂದ ಹಿಂದಿರುಗುತ್ತಿದ್ದ ವೇಳೆ ಸಿರವಾಸೆ ಗ್ರಾಮದ 2ನೇ ತಿರುವಿನಲ್ಲಿ ಮಧ್ಯಪಾನ ಮಾಡಿದ್ದ 8 ಯುವಕರು ಜಿಪ್ಸಿ ವಾಹನದಲ್ಲಿದ್ದ ಯುವತಿಯನ್ನು ಕಂಡು ಚುಡಾಯಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ವಾಹನ ನಿಲ್ಲಿಸಿದ ಪರಿಸರವಾದ ಡಿ.ವಿ.ಗಿರೀಶ್ ಹೀಗೆಲ್ಲಾ ಮಾಡುವುದು ತಪ್ಪು ಎಂದು ಬುದ್ಧಿವಾದ ಹೇಳಿದ್ದಾರೆ. ಇಷ್ಟಕ್ಕೆ ಮಧ್ಯಪಾನ ಮಾಡಿದ್ದ ಯುವಕರ ಗುಂಪು ಗಿರೀಶ್ ಹಾಗೂ ವಾಹನದಲ್ಲಿದ್ದವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಪರಿಸ್ಥಿತಿ ಗಮನಿಸಿದ ಪರಿಸರವಾದ ಗಿರೀಶ್ ತಂಡ ವಾಗ್ವಾದಕ್ಕಿಳಿಯದೇ ಅಲ್ಲಿಂದ ವಾಹನದ ಮೂಲಕ ಚಿಕ್ಕಮಗಳೂರಿನತ್ತ ಬಂದಿದ್ದಾರೆ.
ಆದರೆ ಇಷ್ಟಕ್ಕೆ ಸುಮ್ಮನಾಗದ ಯುವಕರು ಮೂರು ಬೈಕ್ಗಳಲ್ಲಿ ಜಿಪ್ಸಿ ವಾಹನವನ್ನು ಚೇಸ್ ಮಾಡಿಕೊಂಡು ಕಂಬಿಹಳ್ಳ ಎಂಬಲ್ಲಿ ಗಿರೀಶ್ ಅವರಿದ್ದ ವಾಹನವನ್ನು ಅಡ್ಡಗಟ್ಟಿದರೇ ಏಕಾಏಕಿ ಹಲ್ಲೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಲು ಬಂದ ಗಿರೀಶ್ ಸಹಚರ ಮೇಲೂ ಎರಗಿದ ಆರೋಪಿಗಳು ಮನಬಂದಂತೆ ಥಳಿಸಿದ್ದಾರೆ. ಈ ವೇಳೆ ಆರೋಪಿಗಳು ಕಲ್ಲನ್ನು ತೂರಿದ್ದರಿಂದ ಕೀರ್ತಿಕುಮಾರ್ ಎಂಬವರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ರೊಚ್ಚಿಗೆದ್ದಿದ್ದ ಯುವಕರ ಗುಂಪು ಪರಿಸರವಾದಿ ಡಿ.ವಿ.ಗಿರೀಶ್ ಮತ್ತವರ ತಂಡದ ಮೇಲೆ ದಾಳಿ ಮಾಡುತ್ತಿದ್ದುದನ್ನು ಕಂಡ ಸ್ಥಳೀಯ ನಿವಾಸಿಗಳು ಯುವಕರನ್ನು ತಡೆದು ಪರಿಸರವಾದಿಗಳ ತಂಡಕ್ಕೆ ರಕ್ಷಣೆ ನೀಡಿದ್ದಾರೆಂದು ತಿಳಿದು ಬಂದಿದೆ. ಈ ವೇಳೆ ಆರೋಪಿಗಳು ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎನ್ನಲಾಗಿದ್ದು, ಈ ಘಟನೆ ಸಂಬಂಧ ಡಿ.ವಿ.ಗಿರೀಶ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳ ಪೈಕಿ ಓರ್ವ ವ್ಯಕ್ತಿ ಚಿಕ್ಕಮಗಳೂರಿನ ಅರುಣ್ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಪೊಲೀಸರು ಅರಣ್ ಸೇರಿದಂತೆ 8 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದಾರೆಂದು ತಿಳಿದು ಬಂದಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಹಲ್ಲೆ ವೇಳೆ ಸ್ಥಳೀಯರು ಘಟನೆಯ ಮೊಬೈಲ್ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಸೋಮವಾರ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.