NEET ಪರೀಕ್ಷೆ ರದ್ದು: 22.5 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಡೆತ – ಮೊಹಮ್ಮದ್ ನಹೀಮ್ ಆಕ್ರೋಶ

ಮೂಡಿಗೆರೆ ವಿಧಾನಸಭಾ ಕ್ಷೇತ್ರದ NSUI ನಾಯಕ ಹಾಗೂ ಡೇಟಾನೋವಾ ಸ್ಟುಡೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಮೊಹಮ್ಮದ್ ನಹೀಮ್ ಅವರು NEET-UG 2026 ಪರೀಕ್ಷೆಯಲ್ಲಿ ನಡೆದ ಅಕ್ರಮಗಳ ಹಿನ್ನೆಲೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು 22.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿರುವ ಈ ಮಹತ್ವದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಆರೋಪಗಳು ಕೇಳಿಬರುತ್ತಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳ ಪರಿಶ್ರಮ, ಸಮಯ ಮತ್ತು ಭವಿಷ್ಯವನ್ನು ಅಪಾಯಕ್ಕೆ ಒಳಪಡಿಸುವಂತಹ ಘಟನೆಗಳು ಮರುಕಳಿಸುತ್ತಿರುವುದು ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಹಿನ್ನೆಲೆಯಲ್ಲಿ NEET ಪರೀಕ್ಷೆಯನ್ನು ತಕ್ಷಣವೇ ರದ್ದುಪಡಿಸಿ, ಪಾರದರ್ಶಕ ಮತ್ತು ನ್ಯಾಯಸಮ್ಮತ ವಿಧಾನದಲ್ಲಿ ಮರುಪರೀಕ್ಷೆ ನಡೆಸಬೇಕು. ಜೊತೆಗೆ ಈ ಅಕ್ರಮಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.