ಬಣಕಲ್ ಪೊಲೀಸರ ಮಿಂಚಿನ ಕಾರ್ಯಾಚರಣೆ: ಎರಡುಗಂಟೆಯಲ್ಲೇ ಮನೆ ಕಳ್ಳತನ ಭೇದಿಸಿ ಆರೋಪಿಯ ಬಂಧನ

ಬಣಕಲ್: ಮನೆಗೆ ಬೀಗ ಹಾಕಿಕೊಂಡು ತೆರಳಿದ್ದ ಕುಟುಂಬದ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣವನ್ನು ಬಣಕಲ್ ಪೊಲೀಸರು ಕೇವಲ 2ಗಂಟೆಯೊಳಗೆ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುಡ್ಡಹಟ್ಟಿಯ ರೋನಾಲ್ಡ್ ಸಾಲ್ದಾನ ಅವರ ತೋಟದ ರೈಟರ್ ಸುರೇಶ್ ಅವರು ಮಾರ್ಚ್ 17ರಂದು ಮಧ್ಯಾಹ್ನ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದರು. ಸಂಜೆ ಮನೆಗೆ ಮರಳಿದಾಗ, ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು 150 ಗ್ರಾಂ ಚಿನ್ನದ ಆಭರಣಗಳನ್ನು ಕಳವು ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು.
ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ಕೆಲವೇ ಗಂಟೆಯಲ್ಲೆ ಬಣಕಲ್ ಠಾಣೆಯ ಪಿ ಎಸ್ ಐ ರೇಣುಕಾ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಪಕ್ಕದ ತೋಟದ ಕೂಲಿ ಕೆಲಸಕ್ಕೆ ಬಂದಿದ್ದ ಧರ್ಮಸ್ಥಳ ಮೂಲದ ಹರೀಶ್ ಎಂಬುವವನನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡರು.

ವಿಚಾರಣೆಯಲ್ಲಿ ಆತನೇ ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸರು ಆರೋಪಿಯಿಂದ
ಸುಮಾರು ರೂ 22 ಲಕ್ಷ ಮೌಲ್ಯದ ಚಿನ್ನದ ಆಭರಣಗಳು ವಶಪಡಿಸಿಕೊಂಡಿದ್ದಾರೆ.

ಪ್ರಕರಣವನ್ನು ಶೀಘ್ರವಾಗಿ ಭೇದಿಸಿ ಸ್ವತ್ತು ವಶಪಡಿಸಿಕೊಂಡ ಪಿ.ಎಸ್.ಐ. ರೇಣುಕಾ ಮತ್ತು ಸಿಬ್ಬಂದಿಯನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.
ಬಣಕಲ್ ಪೊಲೀಸರ ಕ್ಷಿಪ್ರ ಹಾಗೂ ಸೂಕ್ತ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವರದಿ: ✍️ಸೂರಿ ಬಣಕಲ್