ಮುತ್ತಿಗೇಪುರದಲ್ಲಿ ಸಾವಯವ ಹಾಗೂ ನ್ಯಾನೋ ಗೊಬ್ಬರಗಳ ಕುರಿತು ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಕ್ರಮ ಯಶಸ್ವಿ

ದಿನಾಂಕ: 18 ಜನವರಿ 2026ರಂದು
ಸೆಹಗಲ್ ಫೌಂಡೇಶನ್ ವತಿಯಿಂದ ಮುತ್ತಿಗೇಪುರ, ಹಳೆ ಮೂಡಿಗೆರೆ ಗ್ರಾಮದಲ್ಲಿ ಸಾವಯವ ಹಾಗೂ ನ್ಯಾನೋ ಗೊಬ್ಬರಗಳ ಕುರಿತು ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ತರಬೇತಿಯನ್ನು ಸೆಹಗಲ್ ಫೌಂಡೇಶನ್‌ನ ಫೀಲ್ಡ್ ಅಸಿಸ್ಟೆಂಟ್ ಶ್ರೀ ಸತೀಶ್ ಸಿ.ಡಿ. ಶೆಟ್ಟಿ ಅವರು ನಡೆಸಿಕೊಟ್ಟರು.
ತರಬೇತಿ ಕಾರ್ಯಕ್ರಮದಲ್ಲಿ ಸಾವಯವ ಗೊಬ್ಬರಗಳ ಮಹತ್ವ, ಮಣ್ಣಿನ ಜೀವಜಾಲವನ್ನು ಉಳಿಸುವಲ್ಲಿ ಹಾಗೂ ಕೃಷಿ ಕ್ಷೇತ್ರದಲ್ಲಿ ಅದರ ಮಹತ್ವದ ಪಾತ್ರವನ್ನು ವಿವರಿಸಲಾಯಿತು. ಜೊತೆಗೆ ಪುನರುಜ್ಜೀವನ ಕೃಷಿ (Regenerative Agriculture) ಪದ್ಧತಿಗಳ ಮಹತ್ವವನ್ನು ರೈತರಿಗೆ ತಿಳಿಸಲಾಯಿತು.
ಜೀವಾಮೃತ ಮತ್ತು ಪಂಚಗವ್ಯ ತಯಾರಿಕೆ ಹಾಗೂ ಬಳಕೆಯ ಕುರಿತು ಮಾರ್ಗದರ್ಶನ ನೀಡಲಾಗಿದ್ದು, ರೈತರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಸೆಹಗಲ್ ಫೌಂಡೇಶನ್ ಸಂಸ್ಥೆಯ ಪರಿಚಯ ನೀಡುತ್ತಾ, ಸಾವಯವ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ಸಣ್ಣ ಮತ್ತು ಅಂಚಿನ ರೈತರಿಗೆ ನೀಡಲಾಗುತ್ತಿರುವ ಸಹಕಾರ ಹಾಗೂ ಮಾರ್ಗದರ್ಶನ ಕುರಿತು ವಿವರಿಸಲಾಯಿತು.
ಈ ಸಂದರ್ಭದಲ್ಲಿ ಮುತ್ತಿಗೇಪುರದ ರೈತ ಶ್ರೀ ಸುಂದರೇಶ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡು ಮಾತನಾಡಿದರು.
ಸುಮಾರು 70 ರೈತರು ಈ ತರಬೇತಿಯಲ್ಲಿ ಭಾಗವಹಿಸಿ ಲಾಭ ಪಡೆದರು. ಸೆಹಗಲ್ ಫೌಂಡೇಶನ್‌ನ LRP ಗಳು ಆಗಿರುವ ಶ್ರೀ ಸಮರ್ಥ್ ಹೆಗ್ಗುಡ್ಲು, ಶ್ರೀ ಅಕ್ರುತ್ ಚಿನ್ನಿಗ ಮತ್ತು ಶ್ರೀಮತಿ ವಿಶಾಲಕ್ಷಿ ಸುರೇಶ್ (ಚಂದ್ರಾಪುರ) ಅವರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ತರಬೇತಿ ಕಾರ್ಯಕ್ರಮವು ರೈತರಲ್ಲಿ ಸಾವಯವ ಹಾಗೂ ಪುನರುಜ್ಜೀವನ ಕೃಷಿ ಪದ್ಧತಿಗಳ ಕುರಿತು ಅರಿವು ಮೂಡಿಸಿ, ಸುಸ್ಥಿರ ಕೃಷಿಗೆ ಉತ್ತೇಜನ ನೀಡಿತು.