ಬಣಕಲ್ ನಲ್ಲಿ ಹೆಚ್ಚಿದ ಬಿ ಎಸ್ ಎನ್ ಎಲ್ ನೆಟ್ವರ್ಕ್ ಸಮಸ್ಯೆ: ಗ್ರಾಮಸ್ಥರು ಹೈರಾಣು

ಬಣಕಲ್ :ಕಳೆದ ಕೆಲವು ದಿನಗಳಿಂದ ಬಣಕಲ್ ನಲ್ಲಿ ಬಿ.ಎಸ್.ಎನ್.ಎಲ್. ಮೊಬೈಲ್ ನೆಟ್‌ವರ್ಕ್ ಸಂಪರ್ಕದಲ್ಲಿ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬ ಕಾರಣದಿಂದಾಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಬಣಕಲ್ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಬಿಎಸ್ಎನ್ಎಲ್ ಸಿಮ್‌ ಬಳಸುತ್ತಿದ್ದಾರೆ. ಆದರೆ, ಸರಿಯಾದ ಸೇವೆ ದೊರೆಯದ ಕಾರಣ ಹಲವರು ಬೇರೆ ನೆಟ್‌ವರ್ಕ್‌ಗಳಿಗೆ ಸಿಮ್‌ ಪೋರ್ಟ್‌ ಮಾಡುತ್ತಿದ್ದಾರೆ ಎಂದು ಗ್ರಾಹಕ ಪರ್ವೀಜ್ ಬೇಸರ ವ್ಯಕ್ತಪಡಿಸಿದರು.

ಬಿಎಸ್ಎನ್ಎಲ್ ನೆಟ್‌ವರ್ಕ್‌ ಮೊಬೈಲ್‌ನಲ್ಲಿ ‘4ಜಿ’ ಎಂದು ತೋರಿಸುತ್ತಿದೆ. ಆದರೆ, ಅದೇ ವೇಗದಲ್ಲಿ ಇಂಟರ್‌ನೆಟ್‌ ಹಾಗೂ ಮೊಬೈಲ್ ಕರೆ ಸಂಪರ್ಕ ‌ಸಾಧ್ಯವಾಗದೇ ಗ್ರಾಹಕರು ಕಚೇರಿಗೆ ಹೋಗಿ ದೂರು ನೀಡುತ್ತಿದ್ದಾರೆ. ಸೆಟಿಂಗ್ಸ್‌ನಲ್ಲಿ ‘2ಜಿ’ಗೆ ಬದಲಾಯಿಸಿಕೊಂಡರೆ ಮಾತ್ರ ಕರೆ ಮಾಡಲು ಸಾಧ್ಯವಾಗುತ್ತಿದ್ದು, ಈ ರೀತಿ ಸೆಟ್ಟಿಂಗ್ಸ್ ಬದಲಾಯಿಸಿಕೊಳ್ಳಲು ಬರದೇ ಇರುವಂತಹ ಹಿರಿಯ ನಾಗರಿಕರು ಮತ್ತು ಬೇಸಿಕ್ ಫೋನ್‌ ಬಳಸುತ್ತಿರುವವರು ಬಿಎಸ್ಎನ್ಎಲ್ ಸಿಮ್‌ಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಹಲವಾರು ವರ್ಷಗಳಿಂದ ಬಳಸಿರುವ ಬಿಎಸ್ಎನ್ಎಲ್ ನಂಬರ್ ಅನ್ನು ಬ್ಯಾಂಕಿಂಗ್, ವ್ಯಾಪಾರ ಹಾಗೂ ಆಧಾರ್ ಸೇವೆಗಳಿಗೆ ಲಿಂಕ್ ಮಾಡಿದ್ದೇವೆ. ಇಂತಹ ಸಮಯದಲ್ಲಿ ನಂಬರ್ ಬದಲಾಯಿಸುವುದು ಅಸಾಧ್ಯ. ಹೊಸ ನಂಬರ್‌ಗೆ ಎಲ್ಲ ಸೇವೆಗಳ ಲಿಂಕ್ ಮಾಡಿಸುವುದು ಕಷ್ಟಕರ ಕೆಲಸ ಎನ್ನುತ್ತಾರೆ ಗ್ರಾಹಕ ಪರ್ವೀಜ್ ಅಹ್ಮದ್.


ವರದಿ ✍️ಸೂರಿ ಬಣಕಲ್