ಮೂಡಿಗೆರೆ: ಮೂಡಿಗೆರೆ ಪಟ್ಟಣ ಸೇರಿದಂತೆ ಕೃಷ್ಣಾಪುರ, ಬಣಕಲ್,ಕೊಟ್ಟಿಗೆಹಾರ,ಅತ್ತಿಗೆರೆ,ದೇವನಗೂಲ್ ಸುತ್ತಮುತ್ತಲಿನ ಜನರು ಬೀಮನ ಆಮಾವಾಸ್ಯೆ(ಆಟಿ ಅಮಾವಾಸ್ಯೆ)ಪ್ರಯುಕ್ತ ಗುರುವಾರ ಮುಂಜಾನೆ ಹಾಲೇ ರಸ ಕುಡಿಯುವ ಮೂಲಕ ಆಟಿ ಅಮಾವಾಸ್ಯೆ ಆಚರಿಸಿದರು. ಕೃಷ್ಣಾಪುರದ ಸವಿತಾ ವಿಠಲ ಪೂಜಾರಿ ಮಾತನಾಡಿ,’ ಆಟಿ ಅಮಾವಾಸ್ಯೆಯಂದು ನಸುಕಿನಲ್ಲಿ ಹಾಲೇಮರದ ತೊಗಟೆ ಕಲ್ಲಿನಿಂದ ಜಜ್ಜಿ ತಂದು ಅದಕ್ಕೆ ಕೆಲವು ಜೀರಿಗೆ,ಶುಂಠಿ,ಕಾಳುಮೆಣಸು ಮತ್ತಿತರ ಪದಾರ್ಥಗಳನ್ನು ಹಾಕಿ ಕಡೆದು ರಸ ತೆಗೆಯುತ್ತೇವೆ.ಆಟಿ ಅಮಾವಾಸ್ಯೆಯಂದು ಮಾತ್ರ ಈ ಮರದ ತೊಗಟೆಗೆ ಔಷಧಿಯ ಗುಣವಿದೆ.ಅಂದು ಬೆಳಿಗ್ಗೆ ಖಾಲಿ ಹೊಟ್ಟೆಗೆ ಹಾಲೇ ರಸ ಸೇವಿಸಿದರೆ ರೋಗಗಳು ನಿವಾರಣೆಯಾಗುತ್ತದೆ.ಇದು ಕರಾವಳಿಯಲ್ಲೂ ಈ ಸಂಪ್ರದಾಯ ಜಾರಿಯಲ್ಲಿದೆ.ನಮ್ಮ ಕೃಷ್ಣಾಪುರದಲ್ಲಿ ಅನೇಕ ಮನೆಯ ಸದಸ್ಯರಿಗೆ ನಾವೇ ಹಾಲೇರಸ ಕೊಡುತ್ತೇವೆ.ಪ್ರತಿ ವರ್ಷ ಈ ಪದ್ದತಿ ನಡೆದುಕೊಂಡು ಬರುತ್ತಿದೆ ಎಂದರು.
ಕೊಟ್ಟಿಗೆಹಾರ ದೇವನಗೂಲ್ ನಿವಾಸಿ ಎಂ.ವೀರಪ್ಪ ಗೌಡ ಮಾತನಾಡಿ’ ಮಲೆನಾಡು ಮತ್ತು ಕರಾವಳಿಯಲ್ಲಿ ಆಟಿ ಅಮಾವಾಸ್ಯೆ ಹಬ್ಬ ಸಂಭ್ರಮದಿಂದ ನಡೆಯುತ್ತದೆ.ಬರೀ ಹಾಲೆ ರಸ ಮಾತ್ರ ಸೇವನೆ ಮಾಡಲ್ಲ.ಈ ಸಮಯದಲ್ಲಿ ಮರ ಕೆಸುವಿನ ಪತ್ರಡೆ, ಏಡಿ ಪದಾರ್ಥ,ಕಳಿಲೆ ಪದಾರ್ಥಗಳನ್ನು ಮಾಡಿ ಸೇವನೆ ಮಾಡುವುದು ರೂಢಿಯಲ್ಲಿದೆ. ಇದು ಸುಮಾರು ವರ್ಷಗಳಿಂದ ಪೂರ್ವಜರು ಮಾಡಿಕೊಂಡು ಬಂದಿರುವ ಪದ್ದತಿಯಾಗಿದೆ’ಎಂದರು.