ಬಾಳೂರು: ಚೆನ್ನಹಡ್ಲು,ಹಲಸಿನಮರ ಬಸ್ ನಿಲುಗಡೆಗೆ ಆಗ್ರಹ.

ಬಣಕಲ್: ಗ್ರಾಮೀಣ ಭಾಗದ ಬಾಳೂರು ಹೋಬಳಿಯ ಚೆನ್ನಹಡ್ಲು, ಹಲಸಿನಮರ ಬಳಿ ಕೆಎಸ್ ಆರ್ ಟಿಸಿ ಬಸ್ ನಿಲ್ಲಿಸುವಂತೆ ಆಗ್ರಹಿಸಿ ಶಾಲಾ ಮಕ್ಕಳು, ಸಾರ್ವಜನಿಕರು ಕೊಟ್ಟಿಗೆಹಾರ ಬಸ್ ನಿಲ್ದಾಣದಲ್ಲಿ ಹೊರನಾಡು ಬಸ್ ಚಾಲಕರೊಂದಿಗೆ ಬಸ್ ನಿಲ್ಲಿಸುವಂತೆ ಮನವಿ ಮಾಡಿದರು.

ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಬಿ.ಮಂಜುನಾಥ್ ಮಾತನಾಡಿ’ ಸುಮಾರು ವರ್ಷಗಳಿಂದ ಬೆಂಗಳೂರಿನಿಂದ ಹೊರನಾಡಿಗೆ ಬರುವ ಬಸ್ ಗಳು ಬಾಳೂರು ಸ್ಟೇಜ್ ಹಣ ಪಡೆದು ಚೆನ್ನಹಡ್ಲು, ಹಲಸಿನಮರ ಬಳಿ ಬಸ್ ನಿಲುಗಡೆ ಮಾಡುತ್ತಿದ್ದರು, ಆದರೆ ಕೆಲವು ದಿನಗಳಿಂದ ಬಸ್ ನಿಲುಗಡೆ ಮಾಡದೇ ಶಾಲಾ ಮಕ್ಕಳಿಗೆ ಸಾರ್ವಜನಿಕರಿಗೆ ತೊಂದರೆಯಾಗಿದೆ, ಆದುದರಿಂದ ಕೆಎಸ್ ಆರ್ ಟಿಸಿ ಅಧಿಕಾರಿಗಳು ಬಾಳೂರು ಸ್ಟೇಜಿನಂತೆ ಚೆನ್ನಹಡ್ಲು ಹಾಗೂ ಹಲಸಿನಮರ ಒಂದೇ ಸ್ಟೇಜ್ ಮಾಡಿ ಬಸ್ ನಿಲುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಗ್ರಾಮಸ್ಥೆ ರಶ್ಮಿತಾ ಮಾತನಾಡಿ’ ಮೊನ್ನೆಯಷ್ಟೇ ಹೊರನಾಡಿಗೆ ಹೋಗುವ ಸರ್ಕಾರಿ ಬಸ್ ಗಳು ಬಾಲಕಿಯರನ್ನು, ಮಹಿಳೆಯರನ್ನು ಚೆನ್ನಹಡ್ಲು ಹಾಗೂ ಹಲಸಿನ ಮರದಲ್ಲಿ ನಿಲ್ಲಿಸದೆ ಎಲ್ಲೆಲ್ಲೊ ನಿಲ್ಲಿಸಿ ಇಳಿಸಿದ್ದಾರೆ. ಗ್ರಾಮೀಣ ಭಾಗವಾದ್ದರಿಂದ ಒಬ್ಬಂಟಿ ಮಹಿಳೆಯರು ಮನೆ ಮುಟ್ಟಲು ಪರದಾಡಬೇಕಾಗಿದೆ. ನಮಗೆ ಬಾಳೂರಿಗೆ ಹೋಗುವ ಹಣವನ್ನೇ ಪಡೆದು ಎರಡು ಸ್ಟೇಜ್ ಮಾಡಿ ಸುಖಕರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಬೇಕು’ಎಂದರು.

ಮುಖಂಡ ರಘುಪತಿ ಮಾತನಾಡಿ’ನಾವು ಡಿಪೋ ಮ್ಯಾನೇಜರ್ ಅವರಲ್ಲಿ ಮಾತನಾಡಿದ್ದೇವೆ.ಸೋಮವಾರ ಮೂಡಿಗೆರೆ ಘಟಕ ವ್ಯವಸ್ಥಾಪಕರು ಹಾಗೂ ಸಂಚಾರ ನಿಯಂತ್ರಕರಲ್ಲಿ ಮನವಿ ಸಲ್ಲಿಸುತ್ತೇವೆ.ಅಧಿಕಾರಿಗಳು ಬಾಳೂರು ಹೋಬಳಿ ಗ್ರಾಮೀಣ ಪ್ರದೇಶವಾದ್ದರಿಂದ ಮನೆಗಳು ದೂರ ದೂರ ಇವೆ.ಶಾಲಾ ಮಕ್ಕಳಿಗೆ,ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಎರಡು ಕಡೆ ಬಸ್ ನಿಲ್ಲಿಸಿದರೆ ತುಂಬಾ ಅನುಕೂಲವಾಗುತ್ತದೆ’ಎಂದರು.ಚೆನ್ನಹಡ್ಲು ಹಾಗೂ ಹಲಸಿನ ಮರ ನಿಲುಗಡೆಗೆ ಬಾಳೂರು ಸ್ಟೇಜಿನ ಹಣವನ್ನೇ ನಿಗದಿಪಡಿಸಿದರೆ ನಮಗೆ ಚೆಕ್ಕಿಂಗ್ ಬಂದಾಗ ಅನುಕೂಲವಾಗುತ್ತದೆ.ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ ನಾವು ಬಸ್ ನಿಲುಗಡೆ ಮಾಡುತ್ತೇವೆ ಎಂದು ಹೊರನಾಡು ಬಸ್ ಚಾಲಕರೊಬ್ಬರು ಸಾರ್ವಜನಿಕರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಮನೋಜ್,ವಿಶ್ವನಾಥ್,ಜಗದೀಶ್,ಸಂದೀಪ್, ಚಂದ್ರು,ಮದನ್,ಸುದೀರ್ ಬಾಳೂರು,ಚೆನ್ನಕೇಶವ,ರಾಜು ಚೆನ್ನಹಡ್ಲು,ರಮೇಶ ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.