ಬಣಕಲ್: ದಿನಾಂಕ 23/09/2023ರ ಶನಿವಾರ ಸಂಜೆ ಚಿಕ್ಕಮಗಳೂರು ಜಿಲ್ಲೆ,ಮೂಡಿಗೆರೆ ತಾಲ್ಲೂಕಿನ, ಬಣಕಲ್ ಹೋಬಳಿಯ ಚಕ್ಕಮಕ್ಕಿ ದಾರುಲ್ ಬಯಾನ್ ಖಲಂದರಿಯ್ಯಾ ಎಜುಕೇಷನ್ ಇನ್ಸ್ಟಿಟ್ಯೂಟ್ (ಅನಾಥಾಶ್ರಮ) ನಲ್ಲಿ ಸೋನಾಲ್ ಜೆನೀಸ್ ಲೋಬೊ ಎಂಬ ಮಗುವಿನ 5ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು.ಮಗುವಿನ ತಂದೆ ಪೆಡ್ಡಿ ಲೋಬೊ,ತಾಯಿ ಲೆಮಿನಾ ಹಾಗೂ ಚಿಕ್ಕಮ್ಮ ಆಶಾ,ಚಿಕಪ್ಪ ಫ್ರಾನ್ಸಿಸ್ ಲೋಬೊ ಇವರುಗಳು ಸೇರಿ ಮಗುವಿನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಚಕ್ಕಮಕ್ಕಿ ದಾರುಲ್ ಬಯಾನ್ ಖಲಂದರಿಯ್ಯಾ ಎಜುಕೇಷನ್ ಇನ್ಸ್ಟಿಟ್ಯೂಟ್ (ಅನಾಥಾಶ್ರಮ) ಇಲ್ಲಿ 50ಕ್ಕೂ ಹೆಚ್ಚು ಅನಾಥ ಹಾಗೂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೇಕ್ ಮತ್ತು ಸಿಹಿ ಹಂಚಿಕೆ ಮಾಡಿ ಮಾತನಾಡಿದ ಮಗುವಿನ ತಂದೆ ಪೆಡ್ಡಿ ಲೋಬೊ ಮಕ್ಕಳ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿ ಅನಾವಶ್ಯಕವಾಗಿ ದುಂದುವೆಚ್ಚಮಾಡದೇ ನಿರ್ಗತಿಕ ಅಥವಾ ಬಡ ಮಕ್ಕಳಿಗೆ ಒಂದು ಹೊತ್ತಿನ ಅನ್ನದಾನ ಮಾಡುವುದೋ, ಇಲ್ಲವಾದಲ್ಲಿ ಪರಿಸರದ ಕಾಳಜಿಯಲ್ಲಿ ಗಿಡಗಳನ್ನು ನೆಡುವುದೋ ಈ ತರಹದ ಕೆಲಸಗಳನ್ನು ಮಾಡಿದರೆ ಸಮಾಜಕ್ಕೆ ಮಕ್ಕಳನ್ನು ಮಾದರಿಯನ್ನಾಗಿ ಮಾಡಿದಂತಾಗುತ್ತದೆ ಜೊತೆ ದೇಶಕ್ಕೆ ಉತ್ತಮ ಪ್ರಜೆಯಾಗುವಂತೆ ರೂಪಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಚಕ್ಕಮಕ್ಕಿ ದಾರುಲ್ ಬಯಾನ್ ಖಲಂದರಿಯ್ಯಾ ಎಜುಕೇಷನ್ ಇನ್ಸ್ಟಿಟ್ಯೂಟ್ (ಅನಾಥಾಶ್ರಮ) ಇದರ ಪ್ರಾಂಶುಪಾಲರಾದ ಸಿನಾನ್ ಫೈಝಿ ಖಲಂದರಿ,ಅಧ್ಯಾಪಕರಾದ ಝೈದ್ ಫೈಝಿ ಖಲಂದರಿ,ಸಹ ಅಧ್ಯಾಪಕರಾದ ಮಜೀದ್ ಫೈಝಿ ಖಲಂದರಿ ಹಾಗೂ ದಾರುಲ್ ಬಯಾನ್ ಖಲಂದರಿಯ್ಯಾ ಎಜುಕೇಷನ್ ಇನ್ಸ್ಟಿಟ್ಯೂಟ್ ಇದರ ವಿದ್ಯಾರ್ಥಿಗಳು ಮತ್ತು ಮ್ಯಾನ್ ಕೈಂಡ್ ಕ್ಲಬ್ ಇದರ ಸದಸ್ಯರಾದ ಸಾಜಿದ್ ಬಣಕಲ್ ಉಪಸ್ಥಿತರಿದ್ದರು.