ಬಣಕಲ್ :ತಾಲ್ಲೂಕಿನ ಬಣಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬಣಕಲ್. ತರುವೆ. ಬಿ,ಹೊಸಹಳ್ಳಿ ವ್ಯಾಪ್ತಿಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಸುಮಾರು 15 ಶಾಲೆಗಳ ನೂರಾರು ವಿದ್ಯಾರ್ಥಿಗಳು ವಿವಿಧ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
1 ರಿಂದ 7ನೇ ತರಗತಿಯ ವರೆಗೆ ನಡೆದ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಕಂಠಪಾಠ, ಧಾರ್ಮಿಕ ಪಠಣ, ಛದ್ಮವೇಷ, ಅಭಿನಯ ಗೀತೆ, ಲಘು ಸಂಗೀತ, ಮಾದರಿ ನಿರ್ಮಾಣ, ಚಿತ್ರಕಲೆ ಸೇರಿದಂತೆ 18ಕ್ಕೂ ಹೆಚ್ಚು ಸ್ಪರ್ಧೆ ನಡೆದರೆ, ಸಾಮೂಹಿಕ ವಿಭಾಗದಲ್ಲಿ ಜನಪದ ಗೀತೆ, ಭಾವಗೀತೆ, ಕೋಲಾಟ ಸೇರಿದಂತೆ ಮತ್ತಿತರ ಸ್ಪರ್ಧೆಗಳು ನಡೆದವು.
ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಲಸ್ಟರ್ ಅಧಿಕಾರಿ ದೀಪ , ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದಲೇ ಈ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಎಂದು ಹೇಳಿದರು.
ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಯ ಕಲಿಕಾ ಸಮಾರ್ಥ್ಯ ಮತ್ತಷ್ಟು ವೃದ್ಧಿಯಾಗುತ್ತದೆ ಎಂಬ ಪರಿಕಲ್ಪನೆಯಲ್ಲಿ ಹಲವು ಮಟ್ಟದಲ್ಲಿ ಈ ಸ್ಪರ್ಧಾ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರಲಾಗುತ್ತಿದೆ ಎಂದು ಅವರು ತಿಳಿಸಿದರು.
ಕ್ಲಸ್ಟರ್ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುವ ಜೊತೆಗೆ ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ನೌಕರರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಹಾಗೂ ಮತ್ತಿಕಟ್ಟೆ ಶಾಲೆಯ ಮುಖ್ಯ ಶಿಕ್ಷಕ ಪೂರ್ಣೇಶ್ ಮಾತನಾಡಿ ಪ್ರತಿಯೊಂದು ಮಗುವಿನಲ್ಲಿ ಒಂದು ಪ್ರತಿಭೆ ಅಡಗಿರುತ್ತದೆ. ಪ್ರತಿಭೆಗೆ ಬೆಲೆ ಕಟ್ಟಲಾಗದು. ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು, ಇದನ್ನು ಸದುಪಯೋಗಮಾಡಿಕೊಂಡು ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡುವಂತೆ ಹೇಳಿದರು ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.
ಪಂಚಾಯಿತಿ ಸದಸ್ಯರಾದ ಸಿರಾಜ್, ಆತಿಕಾಬಾನು, ಜರೀನಾ, ಆದಮ್,
ಮುಖ್ಯ ಶಿಕ್ಷಕಿ ಗೌರಿ, ನೌಕರರ ಸಂಘದ ಪೂರ್ಣೇಶ್ ಮತ್ತಾವರ,
ಸಂಪನ್ಮೂಲ ವ್ಯಕ್ತಿಗಳಾದ ದೀಪ, ಛಾಯಾದೇವಿ, ಎಡ್ನಾ ನರೋನಾ, ಜಯಂತ್, ಶಿಕ್ಷಕರಾದ ಮರುಳಸಿದ್ದಪ್ಪ, ಗೋವಿಂದಪ್ಪ, ರಘು, ಶಿವಮೂರ್ತಿ ಇತರರು ಉಪಸ್ಥಿತರಿದ್ದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ