ಹೇಮಾವತಿ ಜಲಾಶಯ ಭರ್ತಿಗೆ ಕೇವಲ 2ಅಡಿ ಬಾಕಿ

ಹಾಸನ: ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದು ರೈತರ ಮುಖದಲ್ಲಿ ಹರ್ಷ ಮೂಡಿಸಿದೆ. ಹೇಮಾವತಿ ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ವಾರದಿಂದ ಮಳೆ ಚುರುಕುಗೊಂಡಿರುವುದರಿಂದ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ವೃದ್ಧಿಸಿದೆ. ಹೇಮಾವತಿ ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು ಜಿಲ್ಲಾಯ ಮೂಡಿಗೆರೆ ಹಾಗೂ ಹಾಸನ ಜಿಲ್ಲಾಯ ಸಕಲೇಶಪುರ ತಾಲೂಕಿನಲ್ಲಿ ಮುಂಗಾರು ಮಳೆ ಬಿರುಸಾಗಿ ಒಳ ಹರಿವಿನ ಪ್ರಮಾಣ ಹೆಚ್ಚುತ್ತಿದೆ.

37.10 ಟಿಎಂಸಿ ಸಂಗ್ರಹಣಾ ಸಾಮಥ್ರ್ಯ ಜಲಾಶಯ ಕಳೆದ ವರ್ಷ ಆಗಸ್ಟ್ ಎರಡನೇ ವಾರದಲ್ಲಿ ಭರ್ತಿಯಾಗಿ ಹೆಚ್ಚುವರಿ ನೀರು ಕ್ರೆಸ್ಟ್ ಗೇಟ್‍ಗಳ ಮೂಲಕ ಬೋರ್ಗರೆಯುತ್ತಾ ನದಿಗೆ ಹರಿಯುತ್ತಿತ್ತು. ಆದರೆ ಈ ವರ್ಷವೂ ಸಹ ಜಲಾಶಯ ಭರ್ತಿಯಾಗಲು ತಡವಾಗಿದೆ 35 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಾದರೆ ಮಾತ್ರ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಲು ನಾಲೆಗಳಲ್ಲಿ ನೀರು ಹರಿಸಲಾಗುವುದು ಅಲ್ಲದೆ ಈಗಾಗಲೇ ಜಲಾಶಯದ ಭದ್ರತಾ ದೃಷ್ಟಿಯಿಂದ ನೀರನ್ನು ನಾಲೆ ಹಾಗು ನದಿಗೆ ಹರಿಬಿಡಲಾಗುತ್ತಿದೆ ಎಂದು ಹೇಮಾವತಿ ಅಣೆಕಟ್ಟು ವಿಭಾಗದ ಎಂಜಿನಿಯರುಗಳು ಸ್ಪಷ್ಟಪಡಿಸಿದ್ದಾರೆ.


ಜಲಾಶಯ ಭರ್ತಿಗೆ ಇನ್ನು ಕೇವಲ ಎರಡು ಅಡಿಗಳಷ್ಟು ನೀರು ತುಂಬಬೇಕಿದೆ. ಒಳ ಹರಿವು ದಿನನಿತ್ಯ 10 ಸಾವಿರ ಕ್ಯುಸೆಕ್ಸ ಹೆಚ್ಚಳವಾಗಿದೆ ಆದರೆ ಮಳೆಯ ಪ್ರಮಾಣ ಇದೇ ರೀತಿ ಹೆಚ್ಚಾದರೆ ಜಲಾಶಯ ತುಂಬಲಿದೆ ಎಂದು ಅಂದಾಜಿಸಲಾಗಿದೆ. 35 ಟಿಎಂಸಿ ನೀರು ಸಂಗ್ರಹ ಸಾಧ್ಯತೆ: ಒಳಹರಿವಿನ ಪ್ರಮಾಣ ಪ್ರತಿದಿನವೂ 10 ಸಾವಿರ ಕ್ಯೂಸೆಕ್ಸ್‍ನಂತೆ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ 35 ಟಿಎಂಸಿ ನೀರು ಸಂಗ್ರಹವಾಗಬಹುದು ಎಂಬ ಆಶಾ ಭಾವ ಮೂಡಿದೆ.

ಇನ್ನೂ ಕಾವೇರಿ ನದಿ ನೀರು ಪ್ರಾಧಿಕಾರದ ಅಣತಿಯಂತೆ ಹೇಮೆಯಿಂದ ಪ್ರತಿದಿನ ಇಂತಿಷ್ಟು ಕ್ಯೂಸೆಕ್ ನೀರು ಹರಿ ಬಿಡಲಾಗುತ್ತಿದೆ. ಒಳಹರಿವು ಹೆಚ್ಚಾದರೆ ಯಾವುದೇ ತೊಂದರೆ ಇಲ್ಲ. ಸಕಲೇಶಪುರ, ಮೂಡಿಗೆರೆ , ಚಿಕ್ಕಮಗಳೂರು ಭಾಗದಲ್ಲಿ ಮಳೆಯ ಪ್ರಮಾಣ ಇಳಿಕೆಯಾದಲ್ಲಿ ಒಳಹರಿವು ಕಡಿಮೆಯಾಗಲಿದೆ.

ಜಲಾಶಯ ಇಂದಿನ ಸ್ಥಿತಿ ಗತಿ
ಗರಿಷ್ಠ ಮಟ್ಟ: 2922 ಅಡಿ. ಇಂದಿನ ಮಟ್ಟ:2919.25. 37 ಟಿಎಂಸಿ ಸಾಮಥ್ರ್ಯ. ಇಂದು 34.47 ಟಿಎಂಸಿ ಸಂಗ್ರಹವಿದೆ. ಒಳ ಹರಿವು:10442 ಕ್ಯೂಸೆಕ್. ಹೊರ ಹರಿವು: 11460 ಕ್ಯೂಸೆಕ್.