ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

ಅಜ್ಜಂಪುರ: ಮಾರುಕಟ್ಟೆಯಲ್ಲಿ ಈರುಳ್ಳಿ ಧಾರಣೆ ಕುಸಿತ ಕಂಡಿದ್ದು, ತಾಲ್ಲೂಕಿನ ರೈತರ ಕಂಗೆಡಿಸಿದೆ. ಅಜ್ಜಂಪುರ ಮತ್ತು ಶಿವನಿ
ಭಾಗದಲ್ಲಿ ಈರುಳ್ಳಿ ಹೆಚ್ಚಾಗಿ ಬೆಳೆದಿದ್ದು, ಇದು ರೈತರ ಪ್ರಮುಖ ವಾಣಿಜ್ಯ ಬೆಳೆ ಹಾಗೂ ಆದಾಯದ ಮೂಲವೂ ಆಗಿದೆ.
ಬೆಂಗಳೂರಿನಲ್ಲಿ 60 ಕೆಜಿ ತೂಕದ ಈರುಳ್ಳಿ ಮೂಟೆಯ ಬೆಲೆ ₹ 150 ಆಗಿದೆ. ಒಂದೆರಡು ದಿನದ ಹಿಂದೆ ಸ್ಥಳೀಯ ವಾಗಿ ₹ 8 ರಿಂದ ₹ 9ಕ್ಕೆ ಖರೀದಿಸುತ್ತದ್ದ ವ್ಯಾಪಾರಸ್ಥರು, ಈಗ ಈರುಳ್ಳಿಯತ್ತ ಮುಖ ಮಾಡುತ್ತಿಲ್ಲ. ಇದು ರೈತರನ್ನು ಮತ್ತಷ್ಟು ಸಂಕಷ್ಠಕ್ಕೆ ತಳ್ಳಿದೆ.

ಮಾರುಕಟ್ಟೆಯಲ್ಲಿ ಈರುಳ್ಳಿ ಧಾರಣೆ ಸ್ಥಿರವಾಗಿಲ್ಲ. ಸತತ ಇಳಿಮುಖವಾಗಿದ್ದು, ಈ ವರ್ಷ ಹೇಳಿಕೊಳ್ಳುವಷ್ಟು ಪರಿಸ್ಥಿತಿ ಉತ್ತಮವಾಗಿಲ್ಲ. ಈರುಳ್ಳಿ, ವ್ಯಾಪಾರ ನಮಗೂ ಬಿಸಿ ಮುಟ್ಟಿಸಿದಿದೆ. ನಷ್ಟ ಅನುಭವಿಸಿದ್ದೇನೆ. ಈರುಳ್ಳಿ ದರ ಏರಿಕೆ ಆಗುವವರೆಗೂ ವ್ಯಾಪಾರದ ಕಡೆಗೆ ಮುಖ ಮಾಡಲ್ಲ ಎನ್ನುತ್ತಾರೆ ಈರುಳ್ಳಿ ವ್ಯಾಪಾರಸ್ಥ ತನ್ವೀರ್.

ಈರುಳ್ಳಿಗೆ ಮಜ್ಜಿಗೆ, ತಳ, ಕೊಳೆ, ನುಲೆ ರೋಗ ತಗುಲಿವೆ. ಅವುಈರುಳ್ಳಿ ಬೆಳೆಯನ್ನು ಬಾಧಿಸುತ್ತಿವೆ. ಈರುಳ್ಳಿ ಗಡ್ಡೆ ಹಿಗ್ಗದಂತೆ ಮತ್ತು ಭೂಮಿಯಲ್ಲಿಯೇ ಗಡ್ಡೆಗಳು ಕೊಳೆಯುವಂತೆ ಮಾಡುತ್ತಿವೆ. ಇವು, ಅನಿವಾರ್ಯವಾಗಿ ಗಡ್ಡೆಯನ್ನು ಭೂಮಿಯಿಂದ ಹೊರ ತೆಗೆಯುವ ಅನಿವಾರ್ಯತೆ ಸೃಷ್ಟಿಸಿದೆ ಎಂದು ಗೌರಾಪುರದ ನಂಜುಂಡಪ್ಪ ಅಳಲು ತೋಡಿಕೊಂಡರು.

ಕೆಲ ರೋಗ, ಗಡ್ಡೆ ಹಿಗ್ಗದಂತೆ ಮಾಡಿ ಇಳುವರಿ ಕುಗ್ಗಿಸಿದರೆ, ಮತ್ತೆ ಕೆಲವು ಭೂಮಿಯಲ್ಲಿಯೇ ಗಡ್ಡೆಗಳನ್ನು ಕರಗಿಸುತ್ತಿವೆ. ಇದು ಇಳುವರಿ ಮೇಲೆ ಪರಿಣಾಮ ಬೀರುತ್ತಿದೆ. ಒಟ್ಟಾರೆ ಶೇ 30 ರಷ್ಟು ಬೆಳೆ ನಷ್ಟವಾಗಲಿದೆ ಎಂದು ಪಟ್ಟಣದ ಈರುಳ್ಳಿ ಬೆಳೆಗಾರ ಮೈಲಾರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಲೆ ಕುಸಿತ ಕಂಗೆಡಿಸಿದ್ದು, ಬೆಳೆಗೆ ಮಾಡಿದ ಖರ್ಚುನಷ್ಟು ಆದಾಯ ಬರುವ ಭರವಸೆ ಕಮರಿದೆ. ಬೆಳೆ ಬೆಳೆಯಲು ಮಾಡಿರುವ ಸಾಲದ ಸುಳಿಯಲ್ಲಿ ಸಿಲುಕಿದ್ದೇವೆ. ಸರ್ಕಾರ, ನಮ್ಮ ನೆರವಿಗೆ ಧಾವಿಸಬೇಕು ಎಂಬುದು ತಾಲ್ಲೂಕಿನ ಈರುಳ್ಳಿ ಬೆಳೆಗಾರ ರೈತರ ಒತ್ತಾಯ.

Sahifa Theme License is not validated, Go to the theme options page to validate the license, You need a single license for each domain name.