ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನ ಪ್ರಯುಕ್ತ, ಈದ್–ಮಿಲಾದ್ ಮೆರವಣಿಗೆ ಬಣಕಲ್ ನಲ್ಲಿ ಭಾನುವಾರ ಸಡಗರದಿಂದ ನಡೆಯಿತು
ಮಾಜಿ ಸೈನಿಕ ದಿನೇಶ್ ಅವರಿಗೆ ಸೇರಿದ ಜಾಗದ ಆವರಣದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬಣಕಲ್ ಹೋಬಳಿಯ ಆರು ಮಸೀದಿಗಳ ಜಮಾತ್ ಬಾಂಧವರೆಲ್ಲರೂ ಸಮೂಹವಾಗಿ ಹಾಜರಿದ್ದು ಉತ್ಸವಕ್ಕೆ ಮೆರಗು ನೀಡಿತು.
ಚಕಮಕಿ ಮಸೀದಿಯಿಂದ ಪ್ರಾರಂಭವಾದ ಮೆರವಣಿಗೆ ಬಣಕಲ್ ಪಟ್ಟಣದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿತು.
ಮೆರವಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಸಂಭ್ರಮ ಮನೆಮಾಡಿತ್ತು. ಇಸ್ಲಾಂ ಧರ್ಮದ ಧ್ವಜಗಳು ರಾರಾಜಿಸಿದವು. ಸಾಂಪ್ರದಾಯಿಕ ದಿರಿಸಿನಲ್ಲಿ ಪುಟಾಣಿಗಳು ಕಣ್ಮನಸೆಳೆದರು. ಮೆರವಣಿಗೆಯುದ್ದಕ್ಕೂ ‘ಕವ್ವಾಲಿ’ಗಳು ಅನುರಣಿಸಿದವು.
ಕಾರ್ಯಕ್ರಮವನ್ನು ಶಾಂತಿಯುತವಾಗಿ ಮತ್ತು ಸುವ್ಯವಸ್ಥಿತವಾಗಿ ನೆರವೇರಿಸಲು ಬಣಕಲ್ ಹಾಗೂ ಮೂಡಿಗೆರೆ ಪೊಲೀಸ್ ಇಲಾಖೆ ವಿಶೇಷ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತ್ತು. ಭದ್ರತೆ, ಸಂಚಾರ ನಿಯಂತ್ರಣ ಮತ್ತು ಜನಸಂದಣಿ ನಿರ್ವಹಣೆಯಲ್ಲಿ ತೋರಿದ ಪೊಲೀಸ್ ಜಾಗರೂಕತೆ ಸ್ಥಳೀಯರಿಂದ ಮೆಚ್ಚುಗೆ ಪಡೆದಿತು.
ವರದಿ :✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ