ಬಣಕಲ್ :ಚುನಾವಣಾ ಹೊತ್ತಿನಲ್ಲಿ ಕಾಮಗಾರಿಗಳ ಗುಣಮಟ್ಟ ಯಾವ ರೀತಿ ಇರಲಿದೆ ಎಂಬುದಕ್ಕೇ ಗುಡ್ಡಹಟ್ಟಿ ರಸ್ತೆ ಒಂದು ನಿದರ್ಶನವಾಗಿದೆ. ಕಾಂಕ್ರಿಟ್ ಹಾಕಿದ ಕೆಲವೇ ತಿಂಗಳಲ್ಲಿ ಕಿತ್ತುಬಂದಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ಕಡಿಮೆ ಸಿಮೆಂಟ್ ಮತ್ತು ಕಡಿಮೆ ಗುಣಮಟ್ಟದ ಡಸ್ಟ್ ರೀತಿಯ ಎಂಸೆಂಡ್ ಬಳಕೆ ಮತ್ತು ಗುತ್ತಿಗೆದಾರನ ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಚುನಾವಣಾ ಸಮಯದಲ್ಲಿ ಮಾಯಜಾಲದಂತೆ ಕಾಮಗಾರಿಗಳು ನಡೆಯುತ್ತದೆ ಎಂಬುದಕ್ಕೆ ಈ ರಸ್ತೆ ಕನ್ನಡಿ ಹಿಡಿದಂತಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಮಾತನಾಡಿದ ಗ್ರಾಮಸ್ಥರಾದ ಅರುಣ್ ಪೂಜಾರಿ ಶಾಸಕರ ಅನುದಾನ ಒಂದು ಕೋಟಿ ರೂಗಳಲ್ಲಿ ಗುತ್ತಿಗೆದಾರ ಮರೇಬೈಲು ಮನು ಎಂಬುವವರು ಕಾಂಕ್ರೀಟ್ ರಸ್ತೆ ಯನ್ನು 2022 ಏಪ್ರಿಲ್ ತಿಂಗಳಲ್ಲಿ ನಿರ್ಮಿಸಿದ್ದರು. ಕಳಪೆ ಕಾಮಗಾರಿ ಆದ ಕಾರಣ ಅದೇ ವರ್ಷದ ಮಳೆಗೆ ರಸ್ತೆ ಸಂಪೂರ್ಣ ಹಾಳಾಗಿತ್ತು ಕೂಡಲೇ ಗುತ್ತಿಗೆದಾರರನ್ನು ಕರೆಸಿ ಸರಿಪಡಿಸಲು ಒತ್ತಾಯಿಸಿದ್ದೆವು, ಮಳೆ ಕಡಿಮೆಯಾದ ಕೂಡಲೆ ಸರಿಪಡಿಸಿ ಕೊಡುವುದಾಗಿ ಭರವಸೆ ನೀಡಿದ್ದರು ಆದರೆ ಮೂರು ವರ್ಷ ಕಳೆದರೂ ರಸ್ತೆ ದುರಸ್ತಿ ಆಗದ ಕಾರಣ ಲೋಕಾಯುಕ್ತರ ಭೇಟಿಗೆ ಅನುಮತಿ ಕೇಳಿದ್ದೆವು. ಇದನ್ನು ಅರಿತ PWD ಇಂಜಿನಿಯರ್ ನಂಜುಂಡಯ್ಯ ನವರು ಇಂದು ಸ್ಥಳಕ್ಕೆ ಭೇಟಿ ನೀಡಿ 2026 ರ ಜನವರಿ ಅಂತ್ಯದ ಒಳಗೆ ಡಾಂಬರ್ ಹಾಕಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೆ ಒಪ್ಪಿದ ಗ್ರಾಮಸ್ಥರು ಮಾತು ತಪ್ಪಿದರೆ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದೇವೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಮೇಶ್ ಗೌಡ್ರು, ರಾಜಮ್ಮ, ಅರುಣ್ ಪೂಜಾರಿ, ಗ್ರಾಮ ಪಂಚಾಯತಿ ಸದಸ್ಯರಾದ ಮದುಕುಮಾರ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಆತಿಕ ಭಾನು, ರಿಯಾಜ್, ಪ್ರವೀಣ್ ಹೊರಟ್ಟಿ, ಕೃಷ್ಣ ಗುಡ್ಡಹಟ್ಟಿ, ಜಾವಿದ್ ಹಾಗೂ ಗುಡ್ಡಹಟ್ಟಿ, ಹೊರಟ್ಟಿ, ಕುವೆಂಪು ನಗರ ಗ್ರಾಮಸ್ಥರು ಹಾಜರಿದ್ದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ