ಮೂಡಿಗೆರೆ :ರಸ್ತೆಯುದ್ದಕ್ಕೂ ತಗ್ಗು-ದಿನ್ನೆಗಳು, ತಗ್ಗು ಗುಂಡಿಗಳಲ್ಲಿ ನೀರು ತುಂಬಿ ಓಡಾಟಕ್ಕೂ ಪರದಾಟ. ಈ ರಸ್ತೆಯಲ್ಲಿ ಒಂದು ಸಲ ಸಂಚರಿಸಿದರೆ ನರಕಯಾತನೆಯ ಅನುಭವ. ಇದು ಮೂಡಿಗೆರೆ ತಾಲೂಕಿನ ಬಿ ಹೊಸಹಳ್ಳಿಯಿಂದ ಕುಂದೂರು, ಭಾರತಿಬೈಲ್, ಮತ್ತಿಕಟ್ಟೆ,ಸಂಪರ್ಕ ಕಲ್ಪಿಸುವ ರಸ್ತೆಯ ದುಃಸ್ಥಿತಿ.
ಹೌದು, ರಸ್ತೆಯುದ್ದಕ್ಕೂ ಬಿದ್ದಿರುವ ತಗ್ಗು- ಗುಂಡಿಗಳ ಪ್ರಯಾಣಿಕರ ಸಂಚಾರಕ್ಕೆ ಕಂಟಕವಾಗಿವೆ. ಈ ಮಾರ್ಗವಾಗಿ ಸಂಚರಿಸುವ ಬಸ್ಗಳು ಸಹ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಿ ಕೆಟ್ಟು ಪರಿತಪಿಸಬೇಕಾದ ಸರದಿ.. ಖಾಸಗಿ ವಾಹನಗಳು ಪರಸ್ಥಿತಿಯು ಇದಕ್ಕೆ ಹೊರತಾಗಿಲ್ಲ. ಈ ರಸ್ತೆಯಲ್ಲಿ ನಿತ್ಯ ಓಡಾಡುವ ಜನರು ರಸ್ತೆಯ ದುಃಸ್ಥಿತಿ ಕಂಡು ಹಿಡಿ ಶಾಪ ಹಾಕುತ್ತಿದ್ದಾರೆ.
ಈ ರಸ್ತೆಯಲ್ಲಿ ಕನಿಷ್ಠ ಪಕ್ಷ ತಗ್ಗು ದಿಣ್ಣೆಗಳಲ್ಲಿ ಒಂದಷ್ಟು ಮಣ್ಣು ಹಾಕಿ ಮುಚ್ಚಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಕೆಲಸವು ನಡೆದಿಲ್ಲ. ಪರಿಣಾಮ ದ್ವಿಚಕ್ರ ವಾಹನ ಸವಾರರ ಪ್ರಯಾಣವಂತು ದೇವರಿಗೆ ಪ್ರೀತಿ ಎನ್ನುವಂತಾಗಿದೆ. ನಿತ್ಯ ಸರ್ಕಸ್ ಮಾಡುತ್ತ ಈ ರಸ್ತೆಯಲ್ಲಿ ಸಂಚರಿಸುವಂತಾಗಿದೆ. ದಶಕಗಳಿಂದ ಈ ಭಾಗಕ್ಕೆ ಸಂಪರ್ಕಿಸುವ ರಸ್ತೆ ಹದಗೆಟ್ಟಿದರೂ ಸಂಬಂಧ ಪಟ್ಟ ಅಧಿಕಾರಿಗಳು ಇದಕ್ಕೂ ತಮಗೂ ಏನು ಸಂಬಂಧವಿಲ್ಲ ಎಂಬಂತೇ ವರ್ತಿಸುತ್ತಿರುವುದು ಸಾರ್ವಜನಿಕರ ಕಂಗೆಣ್ಣಿಗೆ ಗುರಿಯಾಗಿದೆ. ಹದಗೆಟ್ಟ ರಸ್ತೆ ಬಗ್ಗೆ ಈಗಾಗಲೇ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದಾರಂತೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮಸ್ಥ ಚಂದನ್ ರವರು
ರಸ್ತೆಗಳ ದುರಸ್ತಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ವಿವಿಧ ಯೋಜನೆಯಡಿ ಕೋಟ್ಯಾಂತರ ರೂ. ಅನುದಾನ ನೀಡುತ್ತಿದೆ. ಆದರೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಾದ ಜನಪ್ರತಿನಿಧಿಗಳ ಇಚ್ಚಾ ಶಕ್ತಿ ಕೊರತೆ ಹಾಗೂ ಅಧಿಕಾರಿಗಳ ನಿಷ್ಕಾಳಜಿಯಿಂದ ರಸ್ತೆ ಮಾತ್ರ ಹಾಗೇ ಉಳಿಯುವಂತಾಗಿದೆ. ಒಟ್ಟಿನಲ್ಲಿ ಹದಗೆಟ್ಟ ರಸ್ತೆಯ ದುಃಸ್ಥಿತಿಯಿಂದ ಬಿ ಹೊಸಹಳ್ಳಿ ಗ್ರಾಮಸ್ಥರು ನಿತ್ಯ ಹಿಡಿಶಾಪ ಹಾಕುತ್ತಾ ಓಡಾಡುವಂತಾಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ಬಗ್ಗೆ ನಿರ್ಲಕ್ಷ್ಯತನ ಬಿಟ್ಟು ಶೀಘ್ರ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುಂದಾಗಬೇಕಿದೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದರು.
