ನಾಳೆಯಿಂದ ರಾಜ್ಯಾದ್ಯಂತ 6-8ನೇ ತರಗತಿಗಳು ಆರಂಭ.. ಶಾಲಾ ಅಂಗಳಕ್ಕಿಳಿಯಲು ಸಜ್ಜಾದ ವಿದ್ಯಾರ್ಥಿಗಳು

ಬೆಂಗಳೂರು : ರಾಜ್ಯದಲ್ಲಿ ನಾಳೆಯಿಂದ 6 ರಿಂದ 8ನೇ ತರಗತಿ ಶಾಲೆ ಆರಂಭವಾಗುತ್ತಿದ್ದು, ಶಾಲಾ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮೊನ್ನೆ ಸಿಎಂ ನೇತೃತ್ವದಲ್ಲಿ ಶಾಲೆ ಆರಂಭಿಸುವ ಕುರಿತು ಸಭೆ ನಡೆಸಿ ಸಭೆಯಲ್ಲಿ ಶಾಲೆ ಆರಂಭಿಸುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ವಾರದಲ್ಲಿ 5 ದಿನ ಮಾತ್ರ ತರಗತಿಗಳು ನಡೆಯಲಿದ್ದು, ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇದ್ದರೇ ಮಾತ್ರ ಶಾಲೆ ಆರಂಭ ಮಾಡಲಾಗುತ್ತದೆ ಎಂದು ನಿರ್ಣಯ ಕೈಗೊಳ್ಳಲಾಗಿದೆ.

ಆ ಪ್ರಕಾರ ನಾಳೆಯಿಂದ ರಾಜಾದ್ಯಂತ ಶಾಲೆಯ ಘಂಟೆ ಬಾರಿಸಲಿದ್ದು, 6-8ನೆ ತರಗತಿಗಳಿಗೆ ಭೌತಿಕ ತರಗತಿಗಳು ಆರಂಭವಾಗ್ತಿವೆ. ಮೊದಲ ಹಂತದಲ್ಲಿ 9-12 ನೆ ತರಗತಿಗಳನ್ನ ಪ್ರಾರಂಭ ಮಾಡಿದ್ದ ಸರ್ಕಾರ ಇಗ ಬರೋಬ್ಬರಿ 18 ತಿಂಗಳುಗಳ ಬಳಿಕ ಮಾಧ್ಯಮಿಕ ತರಗತಿಗಳ ಭೌತಿಕ ಕ್ಲಾಸ್ ಆರಂಭ ಮಾಡ್ತಿದ್ದು ವಿದ್ಯಾರ್ಥಿಗಳು ಶಾಲಾ ಅಂಗಳಕ್ಕಿಳಿಯಲು ಸಜ್ಜಾಗಿದ್ದಾರೆ.

6-8 ಭೌತಿಕ ತರಗತಿ ಆರಂಭಕ್ಕೆ ಈಗಾಗಲೇ ಸಿದ್ಧತೆಗಳನ್ನು ಪೂರ್ಣಗೊಳಿಸಿದ ಶಿಕ್ಷಣ ಇಲಾಖೆ, ಕೆಲವು ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಕೋರಿದೆ.

ಮಕ್ಕಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮಾಸ್ಕ್ ಧರಿಸಿ ಸುರಕ್ಷತಾ ಕ್ರಮಗಳನ್ನು ಪಾಲಿಸಿ, ಕೋವಿಡ್ ಸೋಂಕು ದೃಢ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ತಾಲೂಕು/ ವಲಯದಲ್ಲಿ ಮಾತ್ರ ಭೌತಿಕ ತರಗತಿಗಳನ್ನು ಆರಂಭಿಸಬೇಕು ಎಂದಿರುವ ಸರ್ಕಾರ, ಶಾಲಾ ಆವರಣದಲ್ಲಿ ಸ್ಯಾನಿಟೈಜೇಶನ್​ ಸೇರಿದಂತೆ ಶಾಲೆ ಓಪನ್ ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.