ಬಣಕಲ್: “ಕನ್ನಡ ಮನಸುಗಳು ಕರ್ನಾಟಕ”ತಂಡದ ವತಿಯಿಂದ ಬಣಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಉಚಿತವಾಗಿ ಬಣ್ಣ ಬಳಿಯುವ ಮೂಲಕ ಶಾಲೆಗೆ ಹೊಸ ಮೆರಗು ನೀಡಲಾಗಿದೆ. ಶಾಲೆಯ ಗೋಡೆಗಳ ಮೇಲೆ ಕನ್ನಡದ ಕವಿಗಳು, ಸಾಂಸ್ಕೃತಿಕ ಚಿತ್ರಕಲೆಗಳನ್ನು ಬಿಡಿಸುವ ಮೂಲಕ ಶಾಲೆಯ ವಾತಾವರಣಕ್ಕೆ ವಿಶೇಷ ಆಕರ್ಷಣೆ ತಂದಿದ್ದಾರೆ.
ಒಂದು ಕಾಲದಲ್ಲಿ ಶಿಥಿಲಾವಸ್ಥೆಯಲ್ಲಿದ್ದು, ವಿದ್ಯುತ್ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದ ಶಾಲೆ ಇಂದು ಸಂಪೂರ್ಣ ಹೊಸ ರೂಪ ಪಡೆದುಕೊಂಡಿದೆ. ವಿದ್ಯುತ್ ವ್ಯವಸ್ಥೆ, ವೇದಿಕೆ ನಿರ್ಮಾಣ, ಟೈಲ್ಸ್ ಅಳವಡಿಕೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಇಂದು ಶಾಲೆ ಕಂಗೊಳಿಸುತ್ತಿದೆ.
ಈ ಬದಲಾವಣೆಯ ಹಿಂದೆ ಬಣಕಲ್ ಶಾಲೆಯ ಹಳೆಯ ವಿದ್ಯಾರ್ಥಿಗಳ ಅಪಾರ ಸಹಕಾರ, ಶಾಲೆಯ ಮೇಲಿನ ಪ್ರೀತಿ ಹಾಗೂ ಅಭಿಮಾನ ಪ್ರಮುಖ ಕಾರಣವಾಗಿದೆ. ತಮ್ಮ ಬಾಲ್ಯದ ನೆನಪುಗಳನ್ನು ಹೊತ್ತ ಶಾಲೆಯ ಅಭಿವೃದ್ಧಿಗಾಗಿ ಹಳೆಯ ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಕೈಜೋಡಿಸಿರುವುದು ನಿಜಕ್ಕೂ ಶ್ಲಾಘನೀಯ.
ಅದರಲ್ಲೂ ತಮ್ಮ ವೈಯಕ್ತಿಕ ಕೆಲಸಕಾರ್ಯಗಳನ್ನು ಬದಿಗಿಟ್ಟು ಬೆಳಗ್ಗೆಯಿಂದ ಸಂಜೆವರೆಗೂ ಸ್ಥಳದಲ್ಲೇ ಇದ್ದು, ಪ್ರತಿಯೊಂದು ಕೆಲಸವನ್ನು ಮುತುವರ್ಜಿಯಿಂದ ಮಾಡಿಸಿದ ಅರುಣ್ ಪೂಜಾರಿ, ಹಸೈನಾರ್, ಮಧು ಕುಮಾರ್ ಅವರ ಸೇವೆ ಮತ್ತು ಸಹಕಾರವನ್ನು ಮರೆಯುವಂತಿಲ್ಲ.
ತಾವು ಕಲಿತ ಶಾಲೆ ಅಭಿವೃದ್ಧಿ ಹೊಂದಬೇಕು, ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ದೊರೆಯಬೇಕು ಎಂಬ ಹಳೆಯ ವಿದ್ಯಾರ್ಥಿಗಳ ಕಾಳಜಿ ಇಂದು ಸಾಕಾರಗೊಂಡಿದೆ.
ಶಾಲೆಯ ಅಭಿವೃದ್ಧಿಗೆ ಆರ್ಥಿಕವಾಗಿ, ದೈಹಿಕವಾಗಿ ಹಾಗೂ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ಪ್ರತಿಯೊಬ್ಬ ಹಳೆಯ ವಿದ್ಯಾರ್ಥಿಗೂ ಹೃತ್ಪೂರ್ವಕ ಅಭಿನಂದನೆಗಳು. ಶಾಲೆಯ ಮೇಲಿನ ನಿಮ್ಮ ಪ್ರೀತಿ, ಒಗ್ಗಟ್ಟು ಮತ್ತು ಸೇವಾ ಮನೋಭಾವ ಇತರರಿಗೂ ಮಾದರಿಯಾಗಲಿ.
ವರದಿ ✍️:ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ