ಮೌನವೇ ಸಾಧನೆ, ತಮ್ಮ ಕೆಲಸವೇ ಮಾತಾಡಬೇಕು ಎಂದು ನಂಬಿ ತೆರೆಮರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೊಟ್ಟಿಗೆಹಾರದ ವೇಣುಗೋಪಾಲ್ ಪೈ

ಬಣಕಲ್ :ಸಮಾಜದ ಏಳಿಗೆ, ದುರ್ಬಲರ ಕಲ್ಯಾಣ ಹಾಗೂ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಪ್ರತಿಯೊಬ್ಬರಿಗೂ ಸಾಧ್ಯವಾಗುವ ಕೆಲಸವಲ್ಲ. ಅದಕ್ಕೆ ಮಾನವೀಯತೆ, ಸಹಾನುಭೂತಿ, ತಾಳ್ಮೆ ಮತ್ತು ಸಮಾಜದ ಬಗ್ಗೆ ಕಾಳಜಿ ಇರಬೇಕು. ಇಂತಹ ಗುಣಗಳನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಂಡು ಜನಸೇವೆಯಲ್ಲೇ ಸಂತೋಷ ಕಾಣುತ್ತಿರುವ ವ್ಯಕ್ತಿ ಕೊಟ್ಟಿಗೆಹಾರದ ವೇಣುಗೋಪಾಲ್ ಪೈ.

Screenshot


ಇವರು ತಮ್ಮ ಸರಳ ವ್ಯಕ್ತಿತ್ವ, ಸೌಮ್ಯ ಸ್ವಭಾವ ಮತ್ತು ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ಗುಣದಿಂದ ವೇಣುಗೋಪಾಲ್ ಪೈ ಅವರು ಜನಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಚಿಕ್ಕವರು-ದೊಡ್ಡವರು ಎಂಬ ಭೇದವಿಲ್ಲದೆ ಎಲ್ಲರೊಂದಿಗೆ ಸ್ನೇಹದಿಂದ ಮಾತನಾಡುವ ಅವರ ಗುಣವೇ ಅವರನ್ನು ಇತರರಿಂದ ವಿಭಿನ್ನರನ್ನಾಗಿಸಿದೆ.

ಹರಳು ಹುರಿದಂತೆ ನೇರ ಹಾಗೂ ಪ್ರಾಮಾಣಿಕ ಮಾತು, ಸಹಾಯ ಮಾಡುವ ಮನೋಭಾವ ಮತ್ತು ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಗುಣದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ರಾಜಕೀಯ, ಕ್ರೀಡೆ, ಸಾಮಾಜಿಕ ಚಟುವಟಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅವರು, ಯಾವುದೇ ಹುದ್ದೆ ಅಥವಾ ಪ್ರಚಾರದ ನಿರೀಕ್ಷೆಯಿಲ್ಲದೆ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಗ್ರಾಮದಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಎದುರಾದಾಗ, ಆರ್ಥಿಕ ಸಂಕಷ್ಟ ಬಂದಾಗ ಅಥವಾ ಇತರೆ ತುರ್ತು ಪರಿಸ್ಥಿತಿಗಳು ಉಂಟಾದಾಗ ಮೊದಲಿಗೆ ನೆನಪಾಗುವ ವ್ಯಕ್ತಿಗಳಲ್ಲಿ ವೇಣುಗೋಪಾಲ್ ಪೈ ಅವರೂ ಒಬ್ಬರು.
ಬಡ ಮತ್ತು ನಿರ್ಗತಿಕ ಕುಟುಂಬಗಳ ನೋವನ್ನು ಹತ್ತಿರದಿಂದ ಅರಿತಿರುವ ಅವರು, ವಿದ್ಯುತ್ ಸೌಲಭ್ಯವಿಲ್ಲದ ಮನೆಗಳಿಗೆ ತಮ್ಮ ಸ್ವಂತ ಖರ್ಚಿನಿಂದ ವಿದ್ಯುತ್ ಸಂಪರ್ಕ ಕಲ್ಪಿಸಿ ಹಲವು ಕುಟುಂಬಗಳ ಬದುಕಿನಲ್ಲಿ ಬೆಳಕು ಮೂಡಿಸಿದ್ದಾರೆ. ಅಷ್ಟೇ ಅಲ್ಲದೆ, ಅನೇಕ ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿದ್ದ ವ್ಯಾಜ್ಯಗಳು, ಕುಟುಂಬ ಕಲಹಗಳು ಹಾಗೂ ಇತರ ಸಮಸ್ಯೆಗಳನ್ನು ನ್ಯಾಯಾಲಯ ಮತ್ತು ಠಾಣೆಗಳ ಮೆಟ್ಟಿಲೇರದಂತೆ ರಾಜಿ ಸಂಧಾನದ ಮೂಲಕ ಬಗೆಹರಿಸಿ ಹಲವರ ಮನಸ್ಸಿನಲ್ಲಿ ಗೌರವ ಗಳಿಸಿದ್ದಾರೆ.


ಸ್ನೇಹಕ್ಕೆ ಅಪಾರ ಬೆಲೆ ನೀಡುವ ಅವರು, ಒಮ್ಮೆ ಪರಿಚಯವಾದವರನ್ನು ಜೀವಿತಾವಧಿಯ ಸ್ನೇಹಿತರಂತೆ ಕಾಣುತ್ತಾರೆ. ಯಾರೇ ಸಹಾಯ ಕೇಳಿಕೊಂಡು ಬಂದರೂ ತಮ್ಮಿಂದಾದಷ್ಟು ನೆರವಾಗಲು ಸದಾ ಸಿದ್ಧರಾಗಿರುವ ಅವರ ಸೇವಾ ಮನೋಭಾವ ಸಮಾಜಕ್ಕೆ ಮಾದರಿಯಾಗಿದೆ. ಜನರ ಕಷ್ಟಗಳನ್ನು ತಮ್ಮ ಕಷ್ಟಗಳೆಂದು ಭಾವಿಸಿ ನೆರವಿನ ಹಸ್ತ ಚಾಚುವ ಅವರ ಗುಣ ನಿಜಕ್ಕೂ ಶ್ಲಾಘನೀಯ.


ಇಂದಿನ ದಿನಗಳಲ್ಲಿ ಹಲವರು ಮಾಡಿದ ಸಣ್ಣ ಕೆಲಸವನ್ನೂ ದೊಡ್ಡದಾಗಿ ಪ್ರಚಾರ ಮಾಡಿಕೊಳ್ಳುವ ಕಾಲದಲ್ಲಿ, ವೇಣುಗೋಪಾಲ್ ಪೈ ಅವರು ಮಾತ್ರ ಪ್ರಚಾರ, ಸನ್ಮಾನ ಮತ್ತು ಜನಪ್ರಿಯತೆಯಿಂದ ದೂರ ಉಳಿದು ಮೌನವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಕೆಲಸವೇ ತಮ್ಮ ಪರಿಚಯವಾಗಬೇಕು, ಸೇವೆಯೇ ತಮ್ಮ ಗುರುತಾಗಬೇಕು ಎಂಬ ನಂಬಿಕೆಯಲ್ಲಿ ಅವರು ಬದುಕುತ್ತಿದ್ದಾರೆ. ಯಾವುದೇ ರೀತಿಯ ಪಬ್ಲಿಸಿಟಿ ಅಥವಾ ಜಾಹೀರಾತುಗಳನ್ನು ಇಷ್ಟಪಡದ ಅವರು, ತೆರೆಮರೆಯಲ್ಲಿ ಉಳಿದುಕೊಂಡೇ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸುತ್ತಿದ್ದಾರೆ.
ಅವರ ನಿಸ್ವಾರ್ಥ ಸೇವೆ, ಮಾನವೀಯ ಮೌಲ್ಯಗಳು ಮತ್ತು ಸಮಾಜದ ಮೇಲಿನ ಕಳಕಳಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. ಸಮಾಜದಲ್ಲಿ ಇಂತಹ ವ್ಯಕ್ತಿಗಳ ಸಂಖ್ಯೆ ಹೆಚ್ಚಾದರೆ ಗ್ರಾಮಗಳ ಅಭಿವೃದ್ಧಿ ಮತ್ತಷ್ಟು ವೇಗ ಪಡೆಯಲಿದೆ ಎಂಬುದು ಹಲವರ ಅಭಿಪ್ರಾಯ. ತಮ್ಮ ಜೀವನವನ್ನು ಜನಸೇವೆಗೆ ಅರ್ಪಿಸಿಕೊಂಡಿರುವ ವೇಣುಗೋಪಾಲ್ ಪೈ ಅವರ ಸೇವಾ ಪಯಣ ಇನ್ನಷ್ಟು ವಿಸ್ತರಿಸಲಿ, ಆರೋಗ್ಯ, ಆಯುಷ್ಯ ಮತ್ತು ಯಶಸ್ಸು ದೊರಕಲಿ ಎಂಬುದು ಗ್ರಾಮಸ್ಥರ ಹಾಗೂ ಅಭಿಮಾನಿಗಳ ಹಾರೈಕೆಯಾಗಿದೆ.
“ಮೌನವಾಗಿ ಮಾಡಿದ ಸೇವೆ ಶಾಶ್ವತವಾಗಿ ಜನರ ಹೃದಯದಲ್ಲಿ ಉಳಿಯುತ್ತದೆ” ಎಂಬ ಮಾತಿಗೆ ಜೀವಂತ ಉದಾಹರಣೆಯಾಗಿ ವೇಣುಗೋಪಾಲ್ ಪೈ ಅವರು ಇಂದು ಸಮಾಜದ ಮುಂದೆ ನಿಂತಿದ್ದಾರೆ.


ವರದಿ ✍️ಸೂರಿ ಬಣಕಲ್