ಪಟ್ಟಣದಲ್ಲಿ ಗೌರಿ ಗಣೇಶ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಬೇಕೆಂದು ಬಣಕಲ್ ಠಾಣಾ PSI ಜಂಬೂರಾಜ್ ಮಹಾಜನ್ ತಿಳಿಸಿದರು.
ಬಣಕಲ್ ಪೋಲಿಸ್ ಠಾಣೆಯಲ್ಲಿ ಗೌರಿ ಗಣೇಶ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಂಡಲಿಯವರು ಗಮನ ಹರಿಸಬೇಕೆಂದರು.ಗಣೇಶ ಮೂರ್ತಿಗಳ ಸಂಘಟಕರಿಗೆ ಕೆಲವೊಂದು ಸೂಚನೆಗಳನ್ನು ನೀಡಿದರು ಸಂಘಟಕರು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಕೂರಿಸುವ ಮೊದಲು ಸಂಬಂಧಪಟ್ಟ ಪೊಲೀಸ್ ಇಲಾಖೆ, ಬೆಸ್ಕಾಂ, ಅಗ್ನಿಶಾಮಕ ಹಾಗೂ ಇತರೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪತ್ರ ಪಡೆಯಬೇಕು. ಧ್ವನಿವರ್ಧಕ ಬಳಕೆಗೆ ಪೊಲೀಸ್ ವೃತ್ತ ನಿರೀಕ್ಷಕರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಸಮಿತಿ ವತಿಯಿಂದ ಸಿಡಿಮದ್ದು ಪಟಾಕಿ ಮುಂತಾದವುಗಳನ್ನು ಸಿಡಿಸುವಾಗ ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಜಾಗರೂಕತೆ ವಹಿಸಬೇಕು ಎಂದರು.
ನಾಗರಿಕರು ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಸಣ್ಣಪುಟ್ಟ ಅಹಿತಕರ ಘಟನೆ ನಡೆದಲ್ಲಿ ಸಮಾಜದ ಹಿರಿಯರು ಮುಂದಾಳತ್ವವಹಿಸಿ ಸಮಸ್ಯೆ ಬಗೆಹರಿಸಬೇಕೆ ಹೊರತು ಅದನ್ನು ಪ್ರಚೋದಿಸಿ ಸಮಸ್ಯೆ ಬಿಗಡಾಯಿಸಲು ಮುಂದಾಗಬಾರದು ಎಂದು ಮನವಿ ಮಾಡಿದರು. ಯಾರೊಬ್ಬರು ಮತ್ತೊಬ್ಬರ ಧಾರ್ಮಿಕ ಭಾವನೆಗಳಿಗೆ ನೋವುಂಟಾಗುವಂತೆ ವರ್ತಿಸಬಾರದು. ಸಮಾಜ ಘಾತುಕ ಶಕ್ತಿಗಳ ಬಗ್ಗೆ ಕೂಡಲೇ ಮಾಹಿತಿ ನೀಡಬೇಕೆಂದು ಕೋರಿದರು.ಈ ಸಂದರ್ಭದಲ್ಲಿ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ :✍️ ಸೂರಿ ಬಣಕಲ್