ಬಣಕಲ್ : ಬಾಲ್ಯದಲ್ಲಿ ಪೋಲಿಯೋಗೆ ತುತ್ತಾಗಿ ಎರಡು ಕಾಲುಗಳು ಕಳೆದುಕೊಂಡರೂ, ಬದುಕಿನಲ್ಲಿ ನಿರಾಶೆ ಕಾಣದ ದಿಟ್ಟ ಮಹಿಳೆ ಬಣಕಲ್ ನ ಹೆಮ್ಮೆಯ ಮಹಿಳೆ ಡೀನಾ ರೋಡ್ರಿಗಸ್.
ಅಂಗವಿಕಲತೆ ಎಂದಾಕ್ಷಣ ಬಹುತೇಕರು ಹಿಂಜರಿಯುತ್ತಾರೆ. ನಮ್ಮ ಬದುಕು ಮುಗಿದೇ ಹೋಯಿತು ಎಂದು ವ್ಯಥೆ ಪಡುತ್ತಾರೆ. ಆದರೆ, ಡೀನ ಸ್ವಸಾಮರ್ಥ್ಯದಿಂದ ಬದುಕು ಕಂಡುಕೊಂಡಿದ್ದಾಳೆ. ನನಗೆ ಅನುಕಂಪ ಬೇಡ, ಬದುಕಲು ಅವಕಾಶ ನೀಡಿ ಎಂದು ಬದುಕು ಕಟ್ಟಿಕೊಂಡು ಸುಂದರ ಜೀವನ ನಡೆಸುತ್ತಿರುವ ಮಹಿಳೆಯ ವಿಶೇಷ ವರದಿ ನಮ್ಮ ಬಣಕಲ್ ನ್ಯೂಸ್ ವತಿಯಿಂದ. ಮೂಡಿಗೆರೆ ತಾಲ್ಲೂಕ್ಕಿನ ಬಣಕಲ್ ಗ್ರಾಮದ ದಿ.ಥೋಮಸ್ ರೋಡ್ರಿಗಸ್ ಹಾಗೂ ಕಾರ್ಮಿನ್ ರೋಡ್ರಿಗಸ್ ದಂಪತಿಯರ ಮೂವರು ಮಕ್ಕಳಲ್ಲಿ ಮೊದಲನೆಯವರೇ ಡೀನಾ ರೋಡ್ರಿಗಸ್. 2 ತಿಂಗಳ ಕೂಸಾಗಿರುವಾಗಲೇ ಜ್ವರ ಬಂದು ಪೋಲಿಯೋ ರೋಗಕ್ಕೆ ತುತ್ತಾದಳು. ಪರಿಣಾಮ ಎರಡೂ ಕಾಲು ಶಕ್ತಿ ಕಳೆದುಕೊಂಡು ನಿಶಕ್ತಿಯಾದವು. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಮಗಳ ಸ್ಥಿತಿ ಕಂಡು ಪೋಷಕರಿಗೆ ದಿಕ್ಕೇ ತೋಚದಂತಾಯಿತು. ಮಗಳ ಮುಂದಿನ ಜೀವನ ಹೇಗೆ ಎಂಬ ಪ್ರಶ್ನಾರ್ಥಕ ಚಿಹ್ನೆ ಅವರಲ್ಲಿ ಮನೆಮಾಡಿತ್ತು. ಮಗಳ ಕಾಲು ಗುಣಪಡಿಸುವುದಕ್ಕೆ ನಡೆಸಿದ ಯತ್ನ ಕೈಗೂಡಲೇ ಇಲ್ಲ. ಆದರೆ, ಆಕೆಯಲ್ಲಿ ಆತ್ಮಸ್ಥೈರ್ಯ ತುಂಬುವಲ್ಲಿ ಮಾತ್ರ ಯಶಸ್ವಿಯಾದರು. ಪರಿಣಾಮ ಅಘಾದ ಆತ್ಮವಿಶ್ವಾಸದಿಂದ ಬೆಳೆದ ಡೀನಾ ಸ್ಥಳೀಯ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಕಾಲೇಜ್ ಶಿಕ್ಷಣ ಬಣಕಲ್ ನಲ್ಲೆ ಪೂರ್ಣಗೊಳಿಸಿದರು.ಕಲಿಯಲು ಹೋದಾಗ ನಾನಾ ಸಮಸ್ಯೆಯನ್ನು ಎದುರಿಸಿದರೂ ಕೂಡ ಯಾವುದಕ್ಕೂ ಅಂಜದೆ ಶಿಕ್ಷಣ ಮುಗಿಸಿದರು. ನಂತರ ಸುಮ್ಮನೆ ಕೂರದೆ ಮನೆಯಲ್ಲೇ ಫ್ಯಾಷನ್ ನೀಡ್ಸ್ ಸಿಲ್ಕ್ ತ್ರೆಡ್ ಜ್ಯುವೇಲರಿ ಪ್ರಾರಂಭಿಸಿದರು. ಅವರೇ ತಯಾರುಮಾಡಿ ಅಂಗಡಿಗಳಿಗೆ ಹಾಗೂ ಮದುವೆ ಸಮಾರಂಭಗಳಿಗೆ ಹೋಲ್ಸೆಲ್ ದರದಲ್ಲಿ ಕೊಡಲು ಪ್ರಾರಂಭಿಸಿ ಯಶಸ್ವಿಯಾದರು.ಈಗ ಅವರು ಪಲ್ಗುಣಿ ಗ್ರಾಮಪಂಚಾಯಿತಿ ಯಲ್ಲಿ ಕಂಟ್ರಾಕ್ಟ್ ಬೇಸಿಕ್ ಮೇಲೆ V.R.W. ಕೆಲಸ ಮಾಡುತ್ತಿದ್ದಾರೆ. ಛಲವೊಂದಿದ್ದರೆ ಯಾವ ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆ ಡೀನಾರವರೇ ಸ್ಫೂರ್ತಿ.
ಚಿಕ್ಕವಯಸ್ಸಿನಲ್ಲೇ ಪೋಲಿಯೋಗೆ ತುತ್ತಾಗಿ ಕಾಲುಗಳನ್ನು ಕಳೆದುಕೊಂಡೆ ಪೋಲಿಯೋದಿಂದಾಗಿ ನನ್ನ ಕಾಲುಗಳು ಕೆಲಸ ಮಾಡುವುದನ್ನು ನಿಲ್ಲಿಸಿರಬಹುದು ಆದರೆ ನನ್ನ ಆತ್ಮ ಸ್ಟೈರ್ಯ ನನ್ನ ನಂಬಿಕೆ ಯಾವತ್ತೂ ನನ್ನ ಕೈ ಬಿಟ್ಟಿಲ್ಲ ಎಂದರು. ಇವತ್ತು ಡೀನಾ ರವರು ಮದುವೆಯಾಗಿ ಪತಿ ಹಾಗೂ ಪುಟ್ಟ ಮಗುವಿನೊಂದಿಗೆ ಸುಂದರ ಜೀವನ ನಡೆಸುತ್ತಿದ್ದಾರೆ.ಅಂಗವಿಕಲೇ ಎಂದಾಕ್ಷಣ ಕೀಳರಿಮೆ ಬೇಡ. ಅದು ಯಾವುದೇ ಶಾಪವೂ ಅಲ್ಲ. ಆದರೆ ಛಲ ಮತ್ತು ದೃಢತೆ ಇದ್ದಿದ್ದೇ ಆದರೇ ಖಂಡಿತವಾಗಿಯೂ ಮುಂದೆ ಬರಬಹುದು ಎನ್ನುವುದಕ್ಕೆ ನಾನೇ ಸಾಕ್ಷಿ ಎಂದರು.ಅವರ ಮುಂದಿನ ಜೀವನ ಹೀಗೆ ಸುಖಕರವಾಗಿರಲಿ ಎಂದು ಬಣಕಲ್ ನ್ಯೂಸ್ ವತಿಯಿಂದ ಹಾರೈಸುತ್ತೇವೆ.*
✍️ವರದಿ:ಸೂರಿ ಬಣಕಲ್*