ಚಿಕ್ಕಮಗಳೂರು, ಜುಲೈ 12: ಆಸ್ಪತ್ರೆಗೆ ಸಾಗಲು ಸೂಕ್ತ ರಸ್ತೆ ಇಲ್ಲದೆ ರೋಗಿಯನ್ನು ಕುಟುಂಬಸ್ಥರೇ ಜೋಳಿಗೆಯಲ್ಲಿ ಹೊತ್ತು ತಂದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಲ್ಕೋಡು ಗ್ರಾಮದಲ್ಲಿ ನಡೆದಿದೆ.70 ವರ್ಷದ ಶೇಷಮ್ಮ ಎನ್ನುವವರು ಅನಾರೋಗ್ಯದಿಂದ ಬಳಲುತ್ತಿದ್ದು, ತರ್ತು ಚಿಕಿತ್ಸೆಯ ಅಗತ್ಯವಿತ್ತು.ಗ್ರಾಮಕ್ಕೆ ರಸ್ತೆಯೇ ಇಲ್ಲದ ಕಾರಣ ಆಂಬುಲೆನ್ಸ್ ಬಾರದ ಪರಿಣಾಮವಾಗಿ ವೃದ್ದೆಯನ್ನು ಜೋಳಿಗೆ ಕಟ್ಟಿ 3ಕಿ.ಮೀ. ಹೊತ್ತು ತಂದು ಕಳಸ ಆಸ್ಪತ್ರೆಗೆ ಸಾಗಿಸಿದ್ದಾರೆ.ಇದು ನಿಜಕ್ಕೂ ಮನಕಲುಕುವ ಘಟನೆ.ಕಲ್ಕೋಡು ಗ್ರಾಮದಿಂದ ಕಳಸ ತಾಲೂಕಿಗೆ ಬರಬೇಕು ಎಂದರೆ 4 ಕಿಲೋ ಮೀಟರ್ ಆಗುತ್ತದೆ. ಕುದುರೆಮುಖ ಮೂಲಕ ಸುತ್ತಿ ಬರಲು 8 ಕಿಲೋ ಮೀಟರ್ ಆಗುತ್ತದೆ. ಆದರೆ ಈ ಮಾರ್ಗ ಮಧ್ಯ ಕಲ್ಕೋಡುದಿಂದ ಮುಕ್ಕಾಲು ಕಿಲೋ ಮೀಟರ್ ಸಾಗಿ ಬಂದರೆ ಆಟೋ ಸಿಗುತ್ತದೆ. ಆದರೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಅಧಿಕಾರಿಗಳು ರಸ್ತೆ ಬಿಡದೇ ಕಲ್ಕೋಡು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.ಕಲ್ಕೋಡು ಗ್ರಾಮ 10 ಮನೆಗಳಿರುವ 30-40 ಜನಸಂಖ್ಯೆ ಇರುವ ಕಾಡಂಚಿನ ಕುಗ್ರಾಮವಾಗಿದೆ. ಇಲ್ಲಿನ ನಿವಾಸಿಗಳು ಮೂಲಭೂತ ಸೌಕರ್ಯ ಮುಖ್ಯವಾಗಿ ಮುಕ್ಕಾಲು ಕಿ.ಮೀ. ರಸ್ತೆಗಾಗಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಮನವಿ ಮಾಡಿದ್ದಾರೆ. ಆದರೆ ಯಾರೂ ಕೂಡ ಈವರೆಗೂ ಕ್ಯಾರೆ ಎಂದಿಲ್ಲ ಎನ್ನುವುದು ಸ್ಥಳೀಯರ ದೂರಾಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕಲ್ಕೋಡು ಗ್ರಾಮದ ಜನರ ಸಮಸ್ಯೆಗೆ ಸ್ಪಂದಿಸ ಬೇಕಾಗಿದೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ