ಬಣಕಲ್ :ಮೂಡಿಗೆರೆ ತಾಲ್ಲೂಕ್ಕಿನ ಬಣಕಲ್ ಗ್ರಾಮದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಸರಿಯಿಲ್ಲದ ಕಾರಣ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಬಣಕಲ್ ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತಗೊಂಡರೆ ಸಾಕು ದಿನಗಟ್ಟಲೆ ಬಿಎಸ್ ಎನ್ ಎಲ್ ನೆಟ್ವರ್ಕ್ ಕೂಡ ಸ್ಥಗಿತಗೊಳ್ಳುತ್ತದೆ ಇದು ಈ ಭಾಗದ ಜನರ ಗೋಳು..ನೆಟ್ವರ್ಕ್ ಬೇಕು ಎಂದರೆ ವಿದ್ಯುತ್ ಅನ್ನೆ ಅವಲಂಬಿಸಬೇಕಾದ ಪರಿಸ್ಥಿತಿ ಉಂಟಾಗಿದೆ .ಇಲ್ಲಿನ ಮೊಬೈಲ್ ಟವರ್ನಿಂದ ಸುತ್ತಲಿನ ಹತ್ತಾರು ಹಳ್ಳಿಗಳಿಗೆ ಸಂಪರ್ಕವಿದೆ. ಈ ಒಂದೇ ಬಿಎಸ್ಎನ್ಎಲ್ ನೆಟವರ್ಕ್ ಅನ್ನೆ ನಂಬಿರುವ ಗ್ರಾಮದವರು ದಿನವಿಡೀ ನೆಟವರ್ಕ್ ಸಂಪರ್ಕ ಕಡಿತಗೊಳ್ಳುತ್ತಿರುವುದರಿಂದ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಪದೇ ಪದೇ ಈ ಸಮಸ್ಯೆಯಿಂದ ಜನ ಕಂಗಲಾಗಿದ್ದಾರೆ.
ಇಲ್ಲಿ3ಜಿ ಸಿಗ್ನಲ್ ಇದ್ದರೂ ಸರಿಯಾಗಿ ಇಂಟರ್ನೆಟ್ ಸಂಪರ್ಕ ಸಿಗುತ್ತಿಲ್ಲ. ಈಗ ನ್ಯಾಯ ಬೆಲೆ ಅಂಗಡಿಯ ಪಡಿತರ ವಿತರಣೆಯಲ್ಲಿ ಒಟಿಪಿ ವ್ಯವಸ್ಥೆ ಇರುವುದರಿಂದ ನೆಟ್ವರ್ಕ್ ಸಮಸ್ಯೆಯಿಂದ ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಸರಿಯಾದ ಸಮಯದಲ್ಲಿ ವಿತರಿಸುವ ಕಾರ್ಯ ಸಾಧ್ಯವಾಗುತ್ತಿಲ್ಲ.ಗ್ಯಾಸ್ ಬುಕಿಂಗೂ ಇದೆ ಸಮಸ್ಯೆ ಆಕಸ್ಮಾತ್ ಏನಾದರೂ ಘಟನೆಯಾದರೆ ಇಲ್ಲವೇ ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿಅಂಬ್ಯುಲೆನ್ಸ್ ಗೆ ಕಾಲ್ ಮಾಡಲು ಸಹ ನೆಟವರ್ಕ್ ಸಿಗುವುದಿಲ್ಲ ಇದರಿಂದ ಜನ ಸಾಮಾನ್ಯರಿಗೆ ತುಂಬಾ ಸಮಸ್ಯೆ ಆಗುತ್ತಿದೆ. ಪಟ್ಟಣ ಪ್ರದೇಶಗಳಲ್ಲಿ ಜನರಿಗೆ ಖಾಸಗಿ ಮೊಬೈಲ್ ನೆಟ್ವರ್ಕ್ ಗಳ ಸೇವೆ ಸಿಗುತ್ತದೆ ಆದರೆ ಹಳ್ಳಿಗಾಡು ಪ್ರದೇಶಗಳಲ್ಲಿ ಜನ ಸರ್ಕಾರಿ ಸ್ವಾಮ್ಯದ ಬಿ ಎಸ್ ಎನ್ ಅನ್ನೆ ನೆಚ್ಚಿಕೊಂಡಿರುತ್ತಾರೆ. ಈ ರೀತಿಯ ನೆಟ್ವರ್ಕ್ ಸಮಸ್ಯೆಗೆ ಜನ ಬಿಎಸ್ಎನ್ಎಲ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ಕಾಲದಲ್ಲಿ ಪ್ರತಿ ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಬಿಎಸ್ಎನ್ಎಲ್ ನೆಟ್ವರ್ಕ್, ಖಾಸಗಿ ಮೊಬೈಲ್ ನೆಟ್ವರ್ಕ್ ಕಂಪೆನಿಗಳು ಬಂದ ಬಳಿಕ ಹಂತ – ಹಂತವಾಗಿ ತನ್ನ ನೆಟ್ವರ್ಕ್ ವ್ಯಾಪ್ತಿಯನ್ನು ಕಳೆದುಕೊಳ್ಳುತ್ತಾ ಸಾಗಿ ಇದೀಗ ಬಳಕೆದಾರರು ಹಿಡಿಶಾಪ ಹಾಕುವ ಪರಿಸ್ಥಿತಿಗೆ ಬಂದು ನಿಂತಿದೆ. ಕರೆಂಟ್ ಹೋದರೆ ಬಿಎಸ್ಎನ್ಎಲ್ ಸಂಪರ್ಕ ಕಳೆದುಕೊಳ್ಳುತ್ತಿದ್ದು, ಕರೆಂಟ್ ಇರುವಾಗ ಮಾತ್ರ ಸೇವೆ ಒದಗಿಸುತ್ತಿದೆ.
ಆದರೆ, ಇನ್ನೂ ಕೆಲವು ಗ್ರಾಮೀಣ ಭಾಗಗಳಲ್ಲಿ ಕರೆಂಟ್ ಇದ್ದರೂ, ಇಲ್ಲದಿದ್ದರೂ ನೆಟ್ವರ್ಕ್ ಸಿಗುವುದೇ ಇಲ್ಲ.ಕರೆಂಟ್ ಹೋದಾಗ ಟವರ್ನ ಬ್ಯಾಟರಿ ಚಾರ್ಜ್ ಮಾಡಲು ಜನರೇಟರ್ಗೆ ಸಮರ್ಪಕವಾಗಿ ಡೀಸೆಲ್ ಒದಗಿಸಲಾಗುತ್ತಿಲ್ಲಎಂಬ ದೂರು ಸಾರ್ವಜನಿಕವಾಗಿ ಕೇಳಿಬರುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಯೂ ವಿಪರೀತವಾಗಿದೆ
ಇನ್ನಾದರೂ ಜನಪ್ರತಿನಿಧಿಗಳು, ಸರ್ಕಾರವು ನೆಟ್ವರ್ಕ್ ಸಮಸ್ಯೆ ಎದುರಿಸುವ ಗ್ರಾಮಗಳಲ್ಲಿ ಕ್ರಮ ಕೈಗೊಂಡು ಸಮರ್ಪಕ ನೆಟ್ವರ್ಕ್ ಸೇವೆ ಒದಗಿಸುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂಬುದು ಗ್ರಾಮಸ್ಥರ ಕೋರಿಕೆ
