ಮೂಡಿಗೆರೆ: ಹಾಸನ ಜಿಲ್ಲೆಯ ಸಮಸ್ಯೆಗೆ ಚಿಕ್ಕಮಗಳೂರು ಜಿಲ್ಲೆಯನ್ನು ಬಲಿಪಶು ಮಾಡುವ ಸರ್ಕಾರದ ಕಾರ್ಯವೈಖರಿ ಖಂಡನೀಯವಾಗಿದೆ. ಒಂದು ಪ್ರದೇಶದ ಸಮಸ್ಯೆಯನ್ನು ಮತ್ತೊಂದು ಪ್ರದೇಶದ ಜನರ ಮೇಲೆ ಹೇರುವ ಕ್ರಮ ಯಾವ ರೀತಿಯ ನ್ಯಾಯ? ಆನೆಗಳನ್ನು ಮೂಡಿಗೆರೆ ಭಾಗಕ್ಕೆ ಸ್ಥಳಾಂತರಿಸುವ ವಿಚಾರದಲ್ಲಿ ಶಾಸಕಿ ನಯನಾ ಮೋಟಮ್ಮ ಮೌನವಾಗಿರುವುದೇಕೆ? ಕ್ಷೇತ್ರದ ಜನರ ಬಗ್ಗೆ ಕಾಳಜಿ ಇಲ್ಲವೇ ಎಂದು ಶ್ರೀರಾಮ ಸೇನೆಯ ಜಿಲ್ಲಾ ವಕ್ತಾರ ಪುನೀತ್ ಕಡಿದಾಳು ಪ್ರಶ್ನಿಸಿದ್ದಾರೆ.
ಹಾಸನ ಜಿಲ್ಲೆಯ ಮಲೆನಾಡಿಗೆ ಹೊಂದಿಕೊಂಡಿರುವ ಗ್ರಾಮಗಳು ಹಾಗೂ ತೋಟಗಳಲ್ಲಿ ಈಗಾಗಲೇ ಮಾನವ-ವನ್ಯಜೀವಿ ಸಂಘರ್ಷ ತೀವ್ರಗೊಂಡಿದೆ. ಅಲ್ಲಿನ ಜನರ ಸಮಸ್ಯೆಗಳನ್ನು ಸ್ಥಳೀಯ ಶಾಸಕರು ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಆನೆಗಳ ಸಂರಕ್ಷಣೆ ಎಷ್ಟು ಮುಖ್ಯವೋ, ಮಲೆನಾಡಿನ ಜನರ ಜೀವ ಮತ್ತು ಜೀವನೋಪಾಯದ ಸಂರಕ್ಷಣೆಯೂ ಅಷ್ಟೇ ಮುಖ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೇಲೂರು-ಚಿಕ್ಕಮಗಳೂರು ಭಾಗದ ನಡುವೆ ಬರುವ ಗೋಣಿಬೀಡು ಹೋಬಳಿ ವಿಶಾಲ ಪ್ರದೇಶವಾಗಿದ್ದು, ಸಾವಿರಾರು ಎಕರೆ ತೋಟಗಳು ಹಾಗೂ ಅನೇಕ ಗ್ರಾಮಗಳನ್ನು ಒಳಗೊಂಡಿದೆ. ಇಲ್ಲಿನ ಬಹುತೇಕ ಜನರು ಕೃಷಿ ಮತ್ತು ತೋಟಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಇದೀಗ ಬೇಲೂರಿನಿಂದ 56 ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಸಂದರ್ಭದಲ್ಲಿ ಚೀಕನಹಳ್ಳಿ ಹಾಗೂ ಗೋಣಿಬೀಡು ಮಾರ್ಗವಾಗಿ ಸಾಗಿಸುವ ಯೋಜನೆ ಇದ್ದು, ಇದರಿಂದ ಸ್ಥಳೀಯ ಜನರಿಗೆ ಎದುರಾಗಬಹುದಾದ ಸಮಸ್ಯೆಗಳನ್ನು ಸರ್ಕಾರ ಮೊದಲೇ ಪರಿಶೀಲಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ಮಲೆನಾಡಿನಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ರೈತರು ಜೀವಭಯದ ನಡುವೆಯೇ ಕೃಷಿ ಚಟುವಟಿಕೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಸಮರ್ಪಕ ಅಧ್ಯಯನ ನಡೆಸದೆ, ಸಾಧಕ-ಬಾಧಕಗಳನ್ನು ಪರಿಶೀಲಿಸದೆ ಆನೆಗಳನ್ನು ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಿಸುವ ನಿರ್ಧಾರ ಕೈಗೊಂಡಿರುವುದು ಖಂಡನೀಯ. ಇದು ಮಲೆನಾಡಿನ ಜನರ ಮೇಲೆ ಸರ್ಕಾರ ನಡೆಸುತ್ತಿರುವ ದೌರ್ಜನ್ಯದಂತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಆನೆಗಳ ಸ್ಥಳಾಂತರಕ್ಕೂ ಮುನ್ನ ಇಲ್ಲಿನ ಪರಿಸರ ವ್ಯವಸ್ಥೆ, ಆಹಾರ ಮತ್ತು ನೀರಿನ ಲಭ್ಯತೆ, ಅರಣ್ಯದ ವಿಸ್ತೀರ್ಣ ಹಾಗೂ ಸ್ಥಳೀಯ ಜನರ ಅಭಿಪ್ರಾಯಗಳನ್ನು ಪರಿಗಣಿಸಬೇಕಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯಿತಿಗಳ ಅಭಿಪ್ರಾಯವನ್ನೂ ಪಡೆಯದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಒಂದು ಪ್ರದೇಶದ ಸಮಸ್ಯೆಗೆ ಮತ್ತೊಂದು ಪ್ರದೇಶದ ಜನರನ್ನು ಬಲಿಪಶು ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ಮೂಡಿಗೆರೆ ತಾಲೂಕಿನ ಹೊಸಕೆರೆ, ಕುಂಬರಡಿ, ಊರುಬಗೆ, ಮೇಕನಗದ್ದೆ, ಮಾಕೋನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಈಗಾಗಲೇ ಆನೆ ಹಾಗೂ ಕಾಡುಕೋಣಗಳ ಹಾವಳಿಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹಲವು ಸಾವು-ನೋವುಗಳೂ ಸಂಭವಿಸಿವೆ. ಈಗಿರುವ ಆನೆಗಳ ಉಪಟಳವನ್ನೇ ನಿಯಂತ್ರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಮತ್ತಷ್ಟು 56 ಆನೆಗಳು ಈ ಭಾಗಕ್ಕೆ ಬಂದರೆ ರೈತರ ಬದುಕಿನ ಗತಿಯೇನು ಎಂಬ ಆತಂಕ ಸ್ಥಳೀಯರಲ್ಲಿ ಮೂಡಿದೆ ಎಂದು ತಿಳಿಸಿದ್ದಾರೆ
ಈ ವಿಚಾರವನ್ನು ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅವರು ಗಂಭೀರವಾಗಿ ಪರಿಗಣಿಸಿ, ಸರ್ಕಾರದ ಗಮನ ಸೆಳೆಯಬೇಕು. ಮಲೆನಾಡಿನ ಜನರ ಜೀವ, ಆಸ್ತಿ ಮತ್ತು ಕೃಷಿ ಭೂಮಿಯ ರಕ್ಷಣೆಗೆ ಆದ್ಯತೆ ನೀಡಬೇಕು. ಆನೆಗಳ ಸ್ಥಳಾಂತರ ನಿರ್ಧಾರವನ್ನು ತಕ್ಷಣ ಕೈಬಿಟ್ಟು, ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಪುನೀತ್ ಕಡಿದಾಳು ಒತ್ತಾಯಿಸಿದ್ದಾರೆ
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ