ಬಣಕಲ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಹಳೆಯ ವಿದ್ಯಾರ್ಥಿಗಳಿಂದ ಕಾಯಕಲ್ಪ; ಬಾಗಿಲು ಮುಚ್ಚಬೇಕಿದ್ದ ಶಾಲೆಗೆ ಮರು ಜೀವ ಕೊಡುತ್ತಿರುವ ವಿದ್ಯಾರ್ಥಿಗಳು

ಬಾಗಿಲು ಮುಚ್ಚಬೇಕಿದ್ದ ಶಾಲೆಗೆ ಹಳೆ ವಿದ್ಯಾರ್ಥಿಗಳು ಮರುಜೀವ ಕೊಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ​ತಾಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದೆ.

ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ
ದೇಗುಲದಷ್ಟೇ ಪವಿತ್ರವಾದ ಸ್ಥಳ ಅಂದ್ರೆ ಅದು ವಿದ್ಯಾ ದೇಗುಲ. ಆದರೆ, ಇತ್ತೀಚೆಗೆ ಎಷ್ಟೋ ಸರ್ಕಾರಿ ಶಾಲೆಗಳು ರಾಜ್ಯದಲ್ಲಿ ಮುಚ್ಚುವ ಸ್ಥಿತಿಗೆ ತಲುಪಿವೆ. ಕೆಲವು ಹಳ್ಳಿಗಳಲ್ಲಿ ಅದೆಷ್ಟೋ ಸರ್ಕಾರಿ ಶಾಲೆಗಳ ಬಾಗಿಲು ಬಂದ್ ಆಗಿ ಕಟ್ಟಡಗಳು ಮುರಿದು ಬಿದ್ದಿವೆ.

ಇದೆ ಸ್ಥಿತಿ ಬಣಕಲ್ ಹಿರಿಯ ಪ್ರಾಥಮಿಕ ಶಾಲೆಯ ಕಥೆಯಾಗಿದೆ. ಅದೆಷ್ಟೋ ವಿದ್ಯಾರ್ಥಿಗಳಿಗೆ ಭವಿಷ್ಯ
ರೂಪಿಸಿದ ಶಾಲೆ ಮುಚ್ಚುವ ಹಂತ ತಲುಪುತ್ತಿರುವುದನ್ನು ಮನಗೊಂಡು ಹೇಗಾದರೂ ಶಾಲೆ ಉಳಿಸಬೇಕು ಎಂದು ಕಳೆದ ಎರಡು ವರ್ಷಗಳಿಂದ ಸತತ ಪ್ರಯತ್ನ ಮಾಡಿ ಸ್ನೇಹಿತರನ್ನು ಸಂಪರ್ಕಿಸಿ ಶಾಲೆ ಉಳಿಸಲು ಮೊದಲ ಪಂಕ್ತಿ ಹಾಕಿದವರೇ ಹಳೆಯ ವಿದ್ಯಾರ್ಥಿ ಹಸೈನಾರ್.

ತಾವು ಓದಿದ ಶಾಲೆ ಮೊದಲಿನಂತೆ ಆಗಬೇಕು ಶಾಲೆ ಉಳಿಸಲೇಬೇಕು ಎಂದು ಹಳೆಯ ವಿದ್ಯಾರ್ಥಿಗಳಾದ ಅರುಣ್ ಪೂಜಾರಿ, ಮಧು ಕುಮಾರ್ ರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಸಂಘ ರಚಿಸಿದರು. ಸಂಘಕ್ಕೆ ಅಧ್ಯಕ್ಷರು, ಉಪಾಧ್ಯಕ್ಷರು, ಖಜಾಂಚಿ, ಕಾರ್ಯದರ್ಶಿಗಳನ್ನು ನೇಮಿಸಿದರು ಹಳೆಯ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪನ್ನು ರಚಿಸಿ ಶಾಲೆಯ ಉಳಿವಿಗೆ ಹಳೆಯ ವಿದ್ಯಾರ್ಥಿಗಳ ಉತ್ತಮ ಬೆಂಬಲದೊಂದಿಗೆ ಶಾಲೆ ಉಳಿಸುವ ಬಹಳ ವರ್ಷಗಳ ಹಸೈನಾರ್ ಕನಸಿಗೆ ರೆಕ್ಕೆ ಪುಕ್ಕ ಸಿಕ್ಕಂತಾಗಿದೆ

ತಾವು ಓದಿದ ಶಾಲೆ ಮುಚ್ಚಬಾರದು ಸರ್ಕಾರಿ ಶಾಲೆಗಳು ಉಳಿಯಬೇಕು ಎಂದು, ಹಳೆಯ ವಿದ್ಯಾರ್ಥಿಗಳ ತಂಡ ಪಣತೊಟ್ಟು ಸ್ವಂತ ಹಣದಿಂದಲೇ ಪಾಳುಬಿದ್ದಂತಿದ್ದ ಕಟ್ಟಡಕ್ಕೆ ಹೊಸ ಬಣ್ಣದ ಮೆರಗು ಕೊಟ್ಟು, ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ಹಳೆಯ ವಿದ್ಯಾರ್ಥಿಗಳಾದ ಮಧು ಕುಮಾರ್ , ಅರುಣ್ ಪೂಜಾರಿ, ಹಸೈನಾರ್ dr ರವಿ, ಸುರಭಿ ರಘು ಮುಂಚೂಣಿಯಲ್ಲಿ ನಿಂತು ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಶಾಲೆಗೆ ಹೊಸರೂಪ ನೀಡುತ್ತಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ನುರಿತ ಶಿಕ್ಷಕರ ಕೊರತೆ , ವಿಶಾಲವಾದ ಕ್ರೀಡಾಂಗಣ ಇದ್ದರೂ ಕೂಡ ಅದರ ಸ್ವಚ್ಛತೆ ಕಡೆ ಗಮನ ಹರಿಸಿರಲಿಲ್ಲ , ಮೂಲಸೌಕರ್ಯಗಳ ಕೊರತೆಯಿಂದ ದಾಖಲಾತಿ ಕೂಡ ಕಡಿಮೆಯಾಗಿತ್ತು ಇದೆಲ್ಲದಕ್ಕೂ ಮುಕ್ತಿ ನೀಡುತ್ತಿದ್ದಾರೆ.

ಇಡೀ ಶಾಲೆಯ ಗೋಡೆಗಳನ್ನು ಸ್ವಚ್ಛಗೊಳಿಸಿ, ಪ್ಲ್ಯಾಸ್ಟರಿಂಗ್, ಬಣ್ಣ ಬಳಿಯುವುದು, ಕಾಂಪೌಂಡ್ ದುರಸ್ತಿ, ಗೇಟ್ ಅಳವಡಿಕೆ, ಫ್ಲಾಟ್ ಫಾರಂ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿದ್ಯುತ್ ಸಂಪರ್ಕ, ಕಂಪ್ಯೂಟರ್ ಕೊಠಡಿಗಳನ್ನು ಸಿದ್ಧಪಡಿಸುತ್ತಿದ್ದಾರೆ.

ಇಷ್ಟೆಲ್ಲ ಕೆಲಸಗಳನ್ನು ಸ್ವತಃ ಹಳೆಯ ವಿದ್ಯಾರ್ಥಿಗಳೇ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ನನ್ನ ಶಾಲೆ, ನನ್ನ ಹೆಮ್ಮೆ ಎಂಬ ಭಾವನೆಯೊಂದಿಗೆ ವಿದ್ಯಾರ್ಥಿಗಳು ಕೈಗೊಂಡಿರುವ ಈ ‘ಶಾಲೆ ಕಾಯಕಲ್ಪ’ ಕಾರ್ಯವು ಸರ್ಕಾರಿ ಶಾಲೆಗಳ ಉಳಿವಿಗೆ ಮತ್ತು ಸುಂದರ ಕಲಿಕಾ ಪರಿಸರ ನಿರ್ಮಾಣಕ್ಕೆ ಸಾಕ್ಷಿಯಾಗಿದೆ.

​ಹಳೆಯ ವಿದ್ಯಾರ್ಥಿಗಳು, ಶಾಲೆಯ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದು, ಇದರಿಂದ ಶಾಲೆಗೆ ಒಂದು ಹೊಸ ರೂಪ ಬಂದಿದೆ ಮುಂದೆಯೂ ಇವರು ಶಾಲೆಗೆ ಹಲವು ರೀತಿಯ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ.

ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿ ಸಂಘ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಶಾಲೆಗೆ ದಾಖಲಾತಿ ಹೆಚ್ಚಾಗಬೇಕು, ಗುಣಾತ್ಮಕ ಶಿಕ್ಷಣ ಸಿಗಬೇಕು ಎಂಬುದೇ ನಮ್ಮ ಮೂಲ ಉದ್ದೇಶ ಎಂದು ಹಳೆಯ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ತಮ್ಮ ಬಾಲ್ಯವನ್ನು ರೂಪಿಸಿದ ಶಾಲೆಯನ್ನ ಉಳಿಸಿ, ಸರ್ಕಾರಿ ಶಾಲೆಯ ಮಹತ್ವ ತಿಳಿಸಿ, ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ.

ಈ ಕುರಿತು ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಧುಗೌಡ ಮಾತನಾಡಿ, ‘ನಾವು ಶಾಲೆಗೆ ಭೇಟಿ ನೀಡಿ ಅವಲೋಕಿಸಿದ ಸಮಯದಲ್ಲಿ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿತ್ತು. ಹೀಗಾಗಿ, ಅಲ್ಲಿನ ಶಿಕ್ಷಕರನ್ನು ಭೇಟಿ ಮಾಡಿ ಮಾತನಾಡಿದೆವು. ಬಿಲ್ಡಿಂಗ್ ಶಿಥಿಲಾವಸ್ಥೆಯಲ್ಲಿತ್ತು. ಕಾಂಪೌಂಡ್ ಬಣ್ಣ ಮಾಸಿತ್ತು. ಹೀಗಾಗಿ, ಶಾಲೆಗೆ ವಿದ್ಯಾರ್ಥಿಗಳನ್ನು ಸೇರಿಸಬೇಕಾದರೆ ಮೊದಲನೆಯದಾಗಿ ಕಟ್ಟಡವನ್ನು ಆಕರ್ಷಣೀಯವಾಗಿಸಬೇಕೆಂಬ ತೀರ್ಮಾನ ಕೈಗೊಂಡೆವು’ ಎಂದಿದ್ದಾರೆ.

ಹಳೆಯ ವಿದ್ಯಾರ್ಥಿ ಸಂಘದ ಅರುಣ್ ಪೂಜಾರಿ ಮಾತನಾಡಿ, ಬಣಕಲ್ ಶಾಲೆ ಅಳಿವಿನಂಚಿನಲ್ಲಿದೆ. ಸುತ್ತಮುತ್ತಲಿನ ಹಳ್ಳಿಗಳಿಗೆ ಈ ಶಾಲೆ ಕೇಂದ್ರೀಯ ಶಾಲೆಯಾಗಿದೆ.ಸಾವಿರಾರು ವಿದ್ಯಾರ್ಥಿಗಳು ಇಲ್ಲಿಂದ ವಿದ್ಯಾಭ್ಯಾಸ ಮಾಡಿ ಉತ್ತಮ ಹುದ್ದೆಯಲ್ಲಿದ್ದಾರೆ.
ಹೀಗಾಗಿ, ಇದನ್ನು ಉಳಿಸಿಕೊಳ್ಳಬೇಕಾಗಿತ್ತು. ಇದರ ಜೀರ್ಣೋದ್ದಾರ ಒಬ್ಬರಿಂದ ಆಗುವ ಕೆಲಸವಲ್ಲ. ಸಾಕಷ್ಟು ಜನರ ಬೆಂಬಲದಿಂದ ಆಗಬೇಕಿತ್ತು. ಹೀಗಾಗಿ, ಇದಕ್ಕೆ ಎಲ್ಲಾ ದಾನಿಗಳು ಸಹಕಾರ ನೀಡಿರುವುದು ಖುಷಿ ತರುವ ವಿಚಾರ’ ಎಂದು ಹೇಳಿದ್ದಾರೆ.

‘ಹಳೆಯ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿದಾಗ, ಅಲ್ಲಿ ಮರ, ಗಿಡಗಳು ಬೆಳೆದುಕೊಂಡಿದ್ದವು. ನಂತರ ಜೆಸಿಬಿಯಿಂದ ಸ್ವಚ್ಛಗೊಳಿಸಿದೆವು. ಬಿಲ್ಡಿಂಗ್ ಪಾಚಿಗಟ್ಟಿತ್ತು. ನಂತರ ಅದನ್ನು ಸ್ವಚ್ಛಗೊಳಿಸಿದೆವು. ಈಗ ಚೆನ್ನಾಗಿ ಕಾಣುತ್ತಿದೆ. ಹಳೆಯ ವಿದ್ಯಾರ್ಥಿಗಳು ಕೆಲಸದ ವಿಚಾರದಲ್ಲಿ ಹಾಗೂ ಧನ ಸಹಾಯದ ವಿಚಾರದಲ್ಲಿ ತುಂಬಾ ಸಹಾಯ ಮಾಡಿದ್ದಾರೆ’ ಎಂದು ಹಳೆಯ ವಿದ್ಯಾರ್ಥಿ ಸಂಘದ ಹಸೈನರ್ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಸರ್ಕಾರ ಮಾಡಬೇಕಾದ ಕೆಲಸವನ್ನು ಇಂದು ಬಣಕಲ್ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಮಾಡಿ ತೋರಿಸಿದ್ದಾರೆ. ಇವರ ಈ ಕಾರ್ಯ ಇಡೀ ಕರ್ನಾಟಕಕ್ಕೆ ಮಾದರಿಯಾಗಿದೆ. ಶಾಲೆ ಅಂದ್ರೆ ಅದು ನಮ್ಮ ಮನೆ ಎಂದು ತೋರಿಸಿಕೊಟ್ಟಿದ್ದಾರೆ. ವಿದ್ಯಾರ್ಥಿಗಳ ಈ ಶ್ರಮಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ವರದಿ ✍️ಸೂರಿ ಬಣಕಲ್