ಮೂಡಿಗೆರೆ ತಾಲ್ಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ಎಸ್. ಎಂ. ಸೆಹಗಲ್ ಫೌಂಡೇಶನ್ ವತಿಯಿಂದ ICCRL ಯೋಜನೆಯಡಿ ಜೀವವೈವಿಧ್ಯ ಮತ್ತು ಅರಣ್ಯ ಸಂರಕ್ಷಣೆ ಕುರಿತು ಸಾಮರ್ಥ್ಯ ವೃದ್ಧಿ ತರಬೇತಿ ಹಾಗೂ ಸ್ಥಳೀಯ (Native) ಸಸಿ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಸೆಹಗಲ್ ಫೌಂಡೇಶನ್ನ ಕ್ಷೇತ್ರ ಸಹಾಯಕ (Field Assistant) ಶ್ರೀ ಸತೀಶ್ ಸಿ. ಡಿ. ಶೆಟ್ಟಿ ಅವರು ನಡೆಸಿಕೊಟ್ಟರು.
ತರಬೇತಿಯಲ್ಲಿ ಜೀವವೈವಿಧ್ಯ ಮತ್ತು ಅರಣ್ಯ ಸಂರಕ್ಷಣೆಯ ಮಹತ್ವವನ್ನು ರೈತರಿಗೆ ವಿವರಿಸಲಾಯಿತು. ಕಾಫಿ ತೋಟಗಳಲ್ಲಿ ಸ್ಥಳೀಯ ಸಸ್ಯಗಳನ್ನು ಬೆಳೆಸುವುದರಿಂದ ಪರಿಸರ ಸಮತೋಲನ ಕಾಪಾಡುವುದು, ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ತೇವಾಂಶವನ್ನು ಸಂರಕ್ಷಿಸುವುದು, ನೆರಳಿನ ಸಮತೋಲನವನ್ನು ಕಾಪಾಡುವುದು, ಮಳೆನೀರಿನ ಸಂಗ್ರಹಕ್ಕೆ ಸಹಕಾರಿಯಾಗುವುದು ಹಾಗೂ ಪಕ್ಷಿಗಳು, ಜೇನುನೊಣಗಳು ಮತ್ತು ಇತರ ಉಪಯುಕ್ತ ಜೀವಿಗಳ ಆಶ್ರಯವನ್ನು ಹೆಚ್ಚಿಸುವುದರ ಮೂಲಕ ಕಾಫಿ ಬೆಳೆ ಉತ್ಪಾದಕತೆ ಹಾಗೂ ಪರಿಸರ ಸಂರಕ್ಷಣೆಗೆ ನೆರವಾಗುತ್ತದೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ರೈತರಿಗೆ ವರ್ಮಿ ಕಂಪೋಸ್ಟ್ ತಯಾರಿಕೆ, ಸ್ಥಳೀಯ ಸಸ್ಯಗಳ ಮಹತ್ವ, ರಸಗೊಬ್ಬರವನ್ನು ವಿಭಜಿತ ಪ್ರಮಾಣದಲ್ಲಿ (Split Dose) ನೀಡುವ ವಿಧಾನ ಹಾಗೂ ಮಣ್ಣಿನ ಪರೀಕ್ಷೆಯ ಅಗತ್ಯತೆ ಕುರಿತು ಶಿಕ್ಷಣಾತ್ಮಕ ವಿಡಿಯೋಗಳನ್ನು ಪ್ರದರ್ಶಿಸಲಾಯಿತು. ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಗೊಬ್ಬರವನ್ನು ಬಳಸುವುದರಿಂದ ಅನಗತ್ಯ ವೆಚ್ಚ ಕಡಿಮೆಯಾಗುವುದರ ಜೊತೆಗೆ ಬೆಳೆಗಳಿಗೆ ಸಮತೋಲನ ಪೋಷಕಾಂಶ ದೊರೆತು ಉತ್ತಮ ಇಳುವರಿ ಪಡೆಯಬಹುದು ಎಂದು ತಿಳಿಸಲಾಯಿತು.
ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಪುನರುಜ್ಜೀವನಾತ್ಮಕ ಕೃಷಿ (Regenerative Agriculture) ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ವಿವರಿಸಲಾಯಿತು. ಜೀವವೈವಿಧ್ಯ ಸಂರಕ್ಷಣೆ ಮತ್ತು ಅರಣ್ಯ ರಕ್ಷಣೆಯು ಕೃಷಿಯ ಭವಿಷ್ಯವನ್ನು ಸುಸ್ಥಿರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ರೈತರಿಗೆ ಅರಿವು ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ 120 ಕ್ಕೂ ಹೆಚ್ಚು ರೈತರು ಭಾಗವಹಿಸಿ ವಿವಿಧ ವಿಷಯಗಳ ಕುರಿತು ಸಂವಾದ ನಡೆಸಿ ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮದ ಯಶಸ್ವಿ ಆಯೋಜನೆಯಲ್ಲಿ ಎಲ್ಆರ್ಪಿ ಸಮರ್ಥ್ ಹಾಗೂ ಎಲ್ಆರ್ಪಿ ಸುರಕ್ಷಾ ಅವರು ಸಕ್ರಿಯವಾಗಿ ಸಹಕರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ರೈತರಿಗೆ ಸ್ಥಳೀಯ (Native) ಸಸಿಗಳನ್ನು ವಿತರಣೆ ಮಾಡಲಾಯಿತು. ಈ ಸಸಿಗಳನ್ನು ತಮ್ಮ ಕಾಫಿ ತೋಟಗಳಲ್ಲಿ ನೆಟ್ಟು ಜೀವವೈವಿಧ್ಯ ಸಂರಕ್ಷಣೆ, ಅರಣ್ಯ ಅಭಿವೃದ್ಧಿ ಮತ್ತು ಪರಿಸರ ಸ್ನೇಹಿ ಕೃಷಿಗೆ ಉತ್ತೇಜನ ನೀಡುವಂತೆ ರೈತರಿಗೆ ಮನವಿ ಮಾಡಲಾಯಿತು.
ಈ ಕಾರ್ಯಕ್ರಮವು ರೈತರಲ್ಲಿ ಜೀವವೈವಿಧ್ಯ ಸಂರಕ್ಷಣೆ, ಅರಣ್ಯ ರಕ್ಷಣೆ, ಮಣ್ಣಿನ ಆರೋಗ್ಯ ಸುಧಾರಣೆ ಹಾಗೂ ಸುಸ್ಥಿರ ಕಾಫಿ ಕೃಷಿಯ ಕುರಿತು ಹೆಚ್ಚಿನ ಅರಿವು ಮತ್ತು ಜಾಗೃತಿಯನ್ನು ಮೂಡಿಸಿದ್ದು, ಭವಿಷ್ಯದಲ್ಲಿ ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲು ಪ್ರೇರಣೆ ನೀಡಿದೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ