ಪಡಿತರ ಧಾನ್ಯ ವಿತರಣೆ ವ್ಯವಸ್ಥೆಯ ಅಡಿಯಲ್ಲಿ ನೀಡುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಬೆರೆಸಲಾಗಿದೆ ಎಂದು ಫಲಾನುಭವಿಗಳು ಆತಂಕಕ್ಕೆ ಒಳಗಾಗಿರುವ ಸನ್ನಿವೇಶ ಬಣಕಲ್ ನಲ್ಲಿ ಎದುರಾಗಿದೆ.
ಅಡುಗೆ ಮಾಡುವಾಗ ರೇಷನ್ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಬಂದಿದೆ ಎಂದು ಗ್ರಾಮಸ್ಥರು ಗಾಬರಿಗೊಂಡಿದ್ದು ಅನ್ನ ಮಾಡಿ ತಿನ್ನಲು ಹೆದರಿದ್ದಾರೆ.ಮಾಹಿತಿ ಕೊರತೆಯಿಂದ ಹೀಗಾಗಿದೆ ಎಂದು ಆಹಾರ ನಿರೀಕ್ಷಕ ಇಂದ್ರೇಶ್ ಬಣಕಲ್ ನ್ಯೂಸ್ ಗೆ ಸ್ಪಷ್ಟನೆ ನೀಡಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ನೀಡಲಾಗುತ್ತಿರುವ ಪಡಿತರ ಅಕ್ಕಿಯಲ್ಲಿ ಸಾರವರ್ಧಿತ ಅಕ್ಕಿಯ ಕಾಳುಗಳು ಇರುವ ಮಾಹಿತಿ ಹೆಚ್ಚಿನ ಜನರಿಗಿಲ್ಲ. ಇದು ಗ್ರಾಮೀಣ ಪ್ರದೇಶದ ಜನರಲ್ಲಿ ಗೊಂದಲವನ್ನು ಉಂಟು ಮಾಡಿದೆ.
ಕೇಂದ್ರ ಸರಕಾರದ ಸಚಿವಾಲಯದ ಮಾರ್ಗಸೂಚಿಯಂತೆ ಪ್ರತಿ 1 ಕೆ.ಜಿ ಅಕ್ಕಿಗೆ 10 ಗ್ರಾಂ. ಸಾರವರ್ಧಿತ ಅಕ್ಕಿಯನ್ನು ಬೆರೆಸಲಾಗುತ್ತಿದೆ. ಬಲವರ್ಧಿತ ಅಕ್ಕಿಯಲ್ಲಿ ಕಬ್ಬಿಣದ ಅಂಶ, ಫೋಲಿಕ್ ಆಮ್ಲ, ಹಾಗೂ ಬಿ ವಿಟಮಿನ್ ಅಂಶಗಳಿವೆ. ಪ್ರತಿ ತಿಂಗಳು ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ವ್ಯಕ್ತಿಗೆ ನೀಡುವ 10 ಕೆ.ಜಿ ಅಕ್ಕಿಯಲ್ಲಿ 5 ಕೆ.ಜಿ ಸಾರವರ್ಧಿತ ಮಿಶ್ರಿತ ಅಕ್ಕಿ ಹಾಗೂ 5 ಕೆ.ಜಿ ಸಾದಾ ಅಕ್ಕಿಯನ್ನು ನೀಡಲು ಸರಕಾರದ ಮಾರ್ಗಸೂಚಿ ಇದೆ. ಇದರ ಅನ್ವಯ ಪಡಿತರ ವಿತರಕರು ಫಲಾನುಭವಿಗಳಿಗೆ ಅಕ್ಕಿ ವಿತರಣೆ ಕೈಗೊಳ್ಳಬೇಕು ಸಾರವರ್ಧಿತ ಅಕ್ಕಿ ಕಾಳುಗಳು ಸಾದಾ ಅಕ್ಕಿಗಿಂತ ಕೊಂಚ ದೊಡ್ಡದಾಗಿದ್ದು, ವಿಭಿನ್ನವಾದ ಬಣ್ಣ ಹೊಂದಿವೆ. ನೀರಿನಲ್ಲಿ ಹಾಕಿದಾಗ ತೇಲುವ ಕಾರಣಕ್ಕೆ ಬಳಕೆದಾರರು ಇದನ್ನು ಬಿಸಾಡಿರುವ ಪ್ರಸಂಗಗಳೂ ಕಂಡುಬಂದಿವೆ.
ಜಾಲತಾಣಗಳಲ್ಲಿ ಪ್ಲಾಸ್ಟಿಕ್ ಅಕ್ಕಿ ಕುರಿತು ಹರಿದಾಡುತ್ತಿರುವ ಸಂದೇಶಗಳಿಂದ ಆತಂಕಕ್ಕೆ ಕಾರಣವಾಗಿರುವ ಸಮಯದಲ್ಲೇ ಸಾರವರ್ಧಿತ ಅಕ್ಕಿಯನ್ನು ಪ್ಲಾಸ್ಟಿಕ್ ಅಕ್ಕಿ ಎಂದು ತಿಳಿದು ಗಾಬರಿಗೊಂಡವರೂ ಇದ್ದಾರೆ. ಪಡಿತರ ಕೇಂದ್ರಗಳಲ್ಲಿ ಅಕ್ಕಿಯ ಕುರಿತು ಸೂಕ್ತ ಪ್ರಚಾರ, ಮಾಹಿತಿ ನೀಡದಿರುವುದು ಒಟ್ಟಾರೆ ಗೊಂದಲಕ್ಕೆ ಕಾರಣವಾಗಿದೆ ಕೇಂದ್ರ ಸರಕಾರದ ಆದೇಶದಂತೆ ಪಡಿತರ ವ್ಯವಸ್ಥೆಯಡಿ ಸಾರವರ್ಧಿತ ಅಕ್ಕಿ ಮಿಶ್ರವಾಗಿರುವ ಅಕ್ಕಿ ವಿತರಣೆ ಕಳೆದ 4 ತಿಂಗಳಿನಿಂದಲೂ ನಡೆಯುತ್ತಿದೆ. ವಿತರಣೆ ಮಾಡುವ ಕುರಿತು ವಿತರಕರಿಗೆ ಸೂಕ್ತ ಮಾಹಿತಿ ನೀಡಲಾಗಿದೆ.
ಸಾರವರ್ಧಿತ ಅಕ್ಕಿಯನ್ನು ಬಳಸದೇ ಬಿಸಾಡುವುದು ಸರಿಯಲ್ಲ. ಇದು ಆರೋಗ್ಯಕ್ಕೆ ಉತ್ತಮ ಅಕ್ಕಿಯಾಗಿದ್ದು ಯಾವುದೇ ಆತಂಕ ಬೇಡ ಎಂದು ಆಹಾರ ನಿರೀಕ್ಷಕ ಇಂದ್ರೇಶ್ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.