ಬಣಕಲ್‌ನಲ್ಲಿ ಬೃಹತ್ ಉಚಿತ ದಂತ ಚಿಕಿತ್ಸಾ ಶಿಬಿರ ಯಶಸ್ವಿ110ಕ್ಕೂ ಅಧಿಕ ಸಾರ್ವಜನಿಕರು ಭಾಗಿ; ಗ್ರಾಮೀಣ ಜನರಿಗೆ ದಂತ ಆರೋಗ್ಯ ಸೇವೆ


ಬಣಕಲ್, ಸೆ. 27: ಸಾಯಿಕೃಷ್ಣ ಹೆಲ್ತ್ ಸೆಂಟರ್, ಬಣಕಲ್ ಹಾಗೂ ಸಾಯಿಕೃಷ್ಣ ದಂತ ಚಿಕಿತ್ಸಾ ಕೇಂದ್ರ, ಬೆಂದ್ರಾಳ ವೆಂಕಟಕೃಷ್ಣ ಇರ್ವತ್ರಾಯ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ (ರಿ.), ಕಕ್ಕಿಂಜೆ ಮತ್ತು ಶ್ರೀಕೃಷ್ಣ ಆಸ್ಪತ್ರೆ, ಕಕ್ಕಿಂಜೆ ಇವರ ಸಹಯೋಗದಲ್ಲಿ, ಯೆನೆಪೋಯ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಇವರ ಸಹಕಾರದೊಂದಿಗೆ ಬೃಹತ್ ಉಚಿತ ದಂತ ಚಿಕಿತ್ಸಾ ಶಿಬಿರ ಸೆಪ್ಟೆಂಬರ್ 27ರಂದು ಸಾಯಿಕೃಷ್ಣ ಹೆಲ್ತ್ ಸೆಂಟರ್, ಬಣಕಲ್‌ನಲ್ಲಿ ನಡೆಯಿತು.


ಶಿಬಿರದಲ್ಲಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ 110ಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಿ ಉಚಿತ ದಂತ ತಪಾಸಣೆ, ವೈದ್ಯಕೀಯ ಸಲಹೆ ಹಾಗೂ ವಿವಿಧ ದಂತ ಚಿಕಿತ್ಸಾ ಸೇವೆಗಳ ಕುರಿತು ಮಾರ್ಗದರ್ಶನ ಪಡೆದುಕೊಂಡರು.


ಕಾರ್ಯಕ್ರಮವನ್ನು ಶ್ರೀಕೃಷ್ಣ ಆಸ್ಪತ್ರೆ, ಕಕ್ಕಿಂಜೆಯ ಆಡಳಿತಾಧಿಕಾರಿ ಶ್ರೀಮತಿ ಜ್ಯೋತಿ ವಿ. ಸ್ವರೂಪ್ ಉದ್ಘಾಟಿಸಿದರು. ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಲ್ಲಿ ದಂತ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಮತ್ತು ಅಗತ್ಯ ಆರೋಗ್ಯ ಸೇವೆಯನ್ನು ಅವರ ಸಮೀಪಕ್ಕೆ ತಲುಪಿಸುವುದು ಇಂತಹ ಶಿಬಿರಗಳ ಉದ್ದೇಶವಾಗಿದೆ. ಸಾರ್ವಜನಿಕರು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಾಯಿಕೃಷ್ಣ ಹೆಲ್ತ್ ಸೆಂಟರ್‌ನ ಮುಖ್ಯ ವೈದ್ಯಾಧಿಕಾರಿ ಡಾ. ಚೈತನ್ಯ ನಾಯಕ್ ಸ್ವಾಗತಿಸಿ, ಆಸ್ಪತ್ರೆಯಲ್ಲಿ ಲಭ್ಯವಿರುವ ವಿವಿಧ ಆರೋಗ್ಯ ಸೇವೆಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.


ಶಿಬಿರದಲ್ಲಿ ಯೆನೆಪೋಯ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಡಾ. ಮೊಹಮ್ಮದ್ ಮಿಫ್ರಾ, ಡಾ. ನೈಮಾ, ಡಾ. ನದೀಮ್, ಶಿಬಿರ ಸಂಯೋಜಕರಾದ ಶ್ರೀ ಸಿರಾಜ್ ಹಾಗೂ ಯೆನೆಪೋಯ ದಂತ ವೈದ್ಯಕೀಯ ತಂಡದವರು ಭಾಗವಹಿಸಿದ್ದರು. ಸಾಯಿಕೃಷ್ಣ ಹೆಲ್ತ್ ಸೆಂಟರ್‌ನ ದಂತ ವೈದ್ಯೆ ಡಾ. ಅಸ್ಮಾ ಫರೀನ್, ವೈದ್ಯರಾದ ಡಾ. ಚೈತನ್ಯ ನಾಯಕ್, ಡಾ. ಶ್ರೀಲಕ್ಷ್ಮಿ ಹಾಗೂ ಡಾ. ಸುಮಂತ್ ಸೇರಿದಂತೆ ವೈದ್ಯಕೀಯ ತಂಡವು ಶಿಬಿರಕ್ಕೆ ಸಹಕಾರ ನೀಡಿತು.


ಕಾರ್ಯಕ್ರಮದಲ್ಲಿ ಡಾ. ಅರ್ಪಿತಾ ಸಿಂಹ – ಹೊಯ್ಸಳ ಹೆಲ್ತ್ ಕೇರ್, ಮೂಡಿಗೆರೆ, ಶ್ರೀಮತಿ ಭವ್ಯಾ ನವೀನ್ ಭಟ್ – ಸಲಹೆಗಾರರು, ಸಾಯಿಕೃಷ್ಣ ಹೆಲ್ತ್ ಸೆಂಟರ್, ಶ್ರೀ ಅನಂತ ಪ್ರಸಾದ್ – ಮ್ಯಾನೇಜರ್, ಶ್ರೀ ಗಣೇಶ್ – ಪಿಆರ್‌ಒ, ಶ್ರೀ ಸುದರ್ಶನ್ ಜೈನ್, ಶ್ರೀ ಅನೀಶ್ ಕೃಷ್ಣ ಇರ್ವತ್ರಾಯ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಸಾಯಿಕೃಷ್ಣ ಹೆಲ್ತ್ ಸೆಂಟರ್ ಆಸ್ಪತ್ರೆ, ಸಿಬ್ಬಂದಿ ಹಾಜರಿದ್ದು ಮತ್ತು ಶಿಬಿರದ ಯಶಸ್ಸಿಗೆ ಸಹಕರಿಸಿದರು.
ಡಾ. ಮುರಳಿಕೃಷ್ಣ ಇರ್ವತ್ರಾಯ ಅವರ ನಿರ್ದೇಶನದಲ್ಲಿ ಹಾಗೂ ಶ್ರೀ ನವೀನ್ ಭಟ್ ತಳವಾರ ಅವರ ಮಾರ್ಗದರ್ಶನದಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು.


ಶಿಬಿರದಲ್ಲಿ ಉಚಿತ ದಂತ ತಪಾಸಣೆ ಹಾಗೂ ತಜ್ಞ ವೈದ್ಯರ ಸಲಹೆಯೊಂದಿಗೆ, ಅಗತ್ಯವಿರುವ ಹಲ್ಲುಗಳ ಕೀಳುವಿಕೆ, ಹಲ್ಲು ತುಂಬಿಸುವಿಕೆ, ಹಲ್ಲುಗಳ ಶುಚೀಕರಣ ಸೇರಿದಂತೆ ವಿವಿಧ ದಂತ ಚಿಕಿತ್ಸಾ ಸೇವೆಗಳ ಕುರಿತು ಮಾರ್ಗದರ್ಶನ ನೀಡಲಾಯಿತು. 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ದಂತಪಂಕ್ತಿ ಅಳವಡಿಕೆ ಹಾಗೂ ಇಂಪ್ಲಾಂಟ್ ಆಧಾರಿತ ದಂತ ಚಿಕಿತ್ಸೆಗೆ ಅಗತ್ಯ ಸಲಹೆ ನೀಡಲಾಗಿದ್ದು, ಯೆನೆಪೋಯ ಆಸ್ಪತ್ರೆಯಲ್ಲಿ ಮುಂದಿನ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸುವ ಕುರಿತು ಮಾಹಿತಿ ನೀಡಲಾಯಿತು.


ಈ ಸಂದರ್ಭದಲ್ಲಿ ಬಣಕಲ್‌ನ ಜೀವರಕ್ಷಕ ಆಂಬುಲೆನ್ಸ್ ಚಾಲಕ, ಆಪದ್ಬಾಂಧವ ಹಾಗೂ ಸಮಾಜ ಸೇವಕ ಶ್ರೀ ಮಹಮ್ಮದ್ ಆರೀಫ್ ಅವರನ್ನು ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.


ಸಮುದಾಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ತಲುಪಿಸುವ ಉದ್ದೇಶದಿಂದ ಆಯೋಜಿಸಲಾದ ಈ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 110ಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡರು.


ಕಾರ್ಯಕ್ರಮವನ್ನು ಶ್ರೀ ಆರೀಶ್ ನಿರೂಪಿಸಿದರು. ಡಾ. ಸುಮಂತ್ ಧನ್ಯವಾದ ಸಮರ್ಪಿಸಿದರು. ಶ್ರೀ ಸುದರ್ಶನ್ ಜೈನ್, ಶ್ರೀ ಗಣೇಶ್, ಶ್ರೀ ಅನಂತ ಪ್ರಸಾದ್, ಶ್ರೀ ಜೈಸನ್ ಸೇರಿದಂತೆ ಸಾಯಿಕೃಷ್ಣ ಹೆಲ್ತ್ ಸೆಂಟರ್‌ನ ಎಲ್ಲಾ ಸಿಬ್ಬಂದಿ ಶಿಬಿರದ ಯಶಸ್ಸಿಗೆ ಸಹಕರಿಸಿದರು.