82 ಅಂಕಗಳೊಂದಿಗೆ ಬಗ್ಗಸಗೋಡು ಶಾಲೆಗೆ ಸಮಗ್ರ ಪ್ರಶಸ್ತಿ

ಬಣಕಲ್: ಬಣಕಲ್ ಪ್ರೌಢಶಾಲಾ ಆವರಣದಲ್ಲಿ ಆಗಸ್ಟ್ 29ರಂದು ನಡೆದ ಬಾಳೂರು–ಬಣಕಲ್ ವಲಯ ಮಟ್ಟದ 14 ವರ್ಷ ವಯೋಮಿತಿ ಒಳಗಿನ ಕ್ರೀಡಾಕೂಟ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಬಗ್ಗಸಗೋಡು ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.

ಶ್ರೀ ವಿದ್ಯಾಭಾರತಿ ವಿದ್ಯಾ ಸಂಸ್ಥೆ (ರಿ.), ಬಣಕಲ್ ಇವರ ಆತಿಥ್ಯದಲ್ಲಿ ನಡೆದ ಕ್ರೀಡಾಕೂಟದಲ್ಲಿ ಬಗ್ಗಸಗೋಡು ಶಾಲೆ ಒಟ್ಟು 82 ಅಂಕಗಳನ್ನು ಗಳಿಸಿ ಬಾಳೂರು–ಬಣಕಲ್ ಹೋಬಳಿ ಮಟ್ಟದ ಶಾಲಾ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಬಾಲಕರ ವಿಭಾಗದಲ್ಲಿ 6ನೇ ತರಗತಿಯ ರಝಾವುಲ್ ಅವರು ವೈಯಕ್ತಿಕ ‘ವೀರಾಗ್ರಣಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು 100 ಮೀಟರ್ ಹಾಗೂ 200 ಮೀಟರ್ ಓಟದಲ್ಲಿ ಪ್ರಥಮ ಮತ್ತು ಉದ್ದಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಬಾಲಕಿಯರ ವಿಭಾಗದಲ್ಲಿ 7ನೇ ತರಗತಿಯ ಕುಮಾರಿ ಸುರಕ್ಷಾ ಅವರು ವೈಯಕ್ತಿಕ ‘ವೀರಾಗ್ರಣಿ’ ಪ್ರಶಸ್ತಿ ಪಡೆದಿದ್ದಾರೆ. ಅವರು 400 ಮೀಟರ್ ಹಾಗೂ 600 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ತಂಡ ಹಾಗೂ ವೈಯಕ್ತಿಕ ಸ್ಪರ್ಧೆಗಳಲ್ಲಿಯೂ ಬಗ್ಗಸಗೋಡು ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದರು. ಬಾಲಕಿಯರ ವಿಭಾಗದಲ್ಲಿ ಥ್ರೋಬಾಲ್ ಮತ್ತು ರಿಲೇಯಲ್ಲಿ ಪ್ರಥಮ ಹಾಗೂ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದರು.

ಬಾಲಕರ ವಿಭಾಗದಲ್ಲಿ ರಿಲೇ, 100 ಮೀಟರ್, 200 ಮೀಟರ್, 400 ಮೀಟರ್ ಹಾಗೂ 600 ಮೀಟರ್ ಓಟಗಳಲ್ಲಿ ಪ್ರಥಮ, 100 ಮೀಟರ್‌ನಲ್ಲಿ ದ್ವಿತೀಯ, 200 ಮೀಟರ್‌ನಲ್ಲಿ ತೃತೀಯ ಹಾಗೂ ಕಬಡ್ಡಿ ಮತ್ತು ಥ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದರು.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು, ಸಹ ಶಿಕ್ಷಕರು, ಪೋಷಕರು, ಹಳೇ ವಿದ್ಯಾರ್ಥಿಗಳು, ಮಹಿಳಾ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.