ಬಣಕಲ್ : ಬಣಕಲ್ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಉದ್ಯಮಿ ದಿನೇಶ್ ಶೆಟ್ಟಿ ಬ್ಯಾಂಡ್ ಸೆಟ್ ಉಡುಗೊರೆಯಾಗಿ ನೀಡಿದ್ದಾರೆ.
ಶಾಲೆಯ ಎಸ್ಡಿಎಂಸಿ ಸದಸ್ಯರಾದ ತನು ಅವರ ಮನವಿಗೆ ತಕ್ಷಣ ಸ್ಪಂದಿಸಿದ ದಿನೇಶ್ ಶೆಟ್ಟಿ, ಯಾವುದೇ ವಿಳಂಬವಿಲ್ಲದೆ ಬ್ಯಾಂಡ್ ಸೆಟ್ ಒದಗಿಸುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡರು. ವಿದ್ಯಾರ್ಥಿಗಳ ಪ್ರತಿಭೆ ಬೆಳಗಿಸುವ ಉದ್ದೇಶದಿಂದ ನೀಡಿದ ಈ ಕೊಡುಗೆಗೆ ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉದ್ಯೋಮಿ ದಿನೇಶ್ ಶೆಟ್ಟಿ, “ನಾನು ಬೆಳೆದ ಊರಿನ ಸರ್ಕಾರಿ ಶಾಲೆಗೆ ನನ್ನಿಂದ ಸಾಧ್ಯವಾದ ನೆರವು ನೀಡುವುದು ನನ್ನ ಕರ್ತವ್ಯ. ಶಾಲೆಯಿಂದ ಮನವಿ ಬಂದ ಕೂಡಲೇ ಸಹಾಯ ಮಾಡಲು ನಿರ್ಧರಿಸಿದೆ. ಈ ಬ್ಯಾಂಡ್ ಸೆಟ್ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳಲು ಮತ್ತು ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ನೆರವಾಗಲಿ ಎಂಬುದು ನನ್ನ ಆಶಯ,” ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕಿ ರೇಷ್ಮಾ ಮಾತನಾಡಿ, “ಶಾಲೆಯ ಬಹುಕಾಲದ ಅಗತ್ಯವಾಗಿದ್ದ ಬ್ಯಾಂಡ್ ಸೆಟ್ನ್ನು ಒಂದೇ ಕರೆಗೆ ಸ್ಪಂದಿಸಿ ಒದಗಿಸಿರುವ ದಿನೇಶ್ ಶೆಟ್ಟಿ ಅವರ ಉದಾರ ಮನೋಭಾವ ಶ್ಲಾಘನೀಯ. ಅವರ ಸಹಕಾರದಿಂದ ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ದೊರೆಯಲಿದ್ದು, ಶಾಲೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ,” ಎಂದರು.
ಶಾಲೆಯ ಕನ್ನಡ ಶಿಕ್ಷಕಿ ಸೆಲಿನ ಮಾತನಾಡಿ, “ದಿನೇಶ್ ಶೆಟ್ಟಿ ಅವರು ತಮ್ಮ ಹುಟ್ಟೂರಿನ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಸಮಾಜಮುಖಿ ವ್ಯಕ್ತಿತ್ವ. ಶಿಕ್ಷಣ ಹಾಗೂ ಸಮಾಜಸೇವೆಗೆ ಸದಾ ಆದ್ಯತೆ ನೀಡುವ ಅವರು, ಒಂದೇ ಮಾತಿಗೆ ಸ್ಪಂದಿಸಿ ಶಾಲೆಯ ಕನಸನ್ನು ನನಸು ಮಾಡಿದ್ದಾರೆ. ಅವರ ಈ ಸೇವಾಭಾವ ಇತರರಿಗೂ ಮಾದರಿಯಾಗಿದೆ,” ಎಂದು ಹೇಳಿದರು.
ಎಸ್ಡಿಎಂಸಿ ಅಧ್ಯಕ್ಷರಾದ ಇದ್ರೀಸ್ ಮಾತನಾಡಿ, “ನಮ್ಮ ಶಾಲೆಯ ಮನವಿಗೆ ತಕ್ಷಣ ಸ್ಪಂದಿಸಿ ಮಾತು ಉಳಿಸಿಕೊಂಡ ದಿನೇಶ್ ಶೆಟ್ಟಿ ಅವರಿಗೆ ಎಸ್ಡಿಎಂಸಿ ಹಾಗೂ ಶಾಲೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು. ಅವರ ಸಹಕಾರವನ್ನು ಶಾಲೆ ಸದಾ ಸ್ಮರಿಸಲಿದೆ,” ಎಂದರು.
ಬಣಕಲ್ ಹೋಬಳಿ ಬಿಜೆಪಿ ಕಾರ್ಯದರ್ಶಿ ಅರುಣ್ ಪೂಜಾರಿ ಮಾತನಾಡಿ, “ಇದು ಸರ್ಕಾರಿ ಶಾಲೆ ಎನ್ನುವುದೇ ನಂಬಲಾಗದಷ್ಟು ಉತ್ತಮವಾಗಿ ಅಭಿವೃದ್ಧಿಗೊಂಡಿದೆ. ಸ್ವಚ್ಛತೆ, ಶಿಸ್ತು, ಮೂಲಸೌಕರ್ಯ ಹಾಗೂ ಶಿಕ್ಷಣದ ಗುಣಮಟ್ಟದಲ್ಲಿ ಖಾಸಗಿ ಇಂಗ್ಲಿಷ್ ಕಾನ್ವೆಂಟ್ ಶಾಲೆಯನ್ನೇ ನೆನಪಿಸುವಂತಿದೆ. ಇಂತಹ ಶಾಲೆಗೆ ದಿನೇಶ್ ಶೆಟ್ಟಿ ಅವರು ಬ್ಯಾಂಡ್ ಸೆಟ್ ನೀಡಿರುವುದು ವಿದ್ಯಾರ್ಥಿಗಳ ಪ್ರತಿಭೆಗೆ ಮತ್ತಷ್ಟು ಉತ್ತೇಜನ ನೀಡಲಿದೆ. ಸರ್ಕಾರಿ ಶಾಲೆಗಳ ಬಗ್ಗೆ ಜನರ ದೃಷ್ಟಿಕೋನವನ್ನೇ ಬದಲಾಯಿಸುವಂತಹ ಶಿಕ್ಷಣದ ವಾತಾವರಣ ಇಲ್ಲಿ ನಿರ್ಮಾಣವಾಗಿದೆ,” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಬಣಕಲ್ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಪೂರ್ಣ ಬ್ಯಾಂಡ್ ಸೆಟ್ನ್ನು ಉಡುಗೊರೆಯಾಗಿ ನೀಡಿದ ದಾನಿ ದಿನೇಶ್ ಶೆಟ್ಟಿ ಅವರನ್ನು ಮುಖ್ಯ ಶಿಕ್ಷಕಿ ರೇಷ್ಮಾ, ಎಸ್ಡಿಎಂಸಿ ಸದಸ್ಯರು, ಸಮಾಜಸೇವಕ ಅರುಣ್ ಪೂಜಾರಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ