ಅಪಘಾತದಿಂದ ಗಾಯಗೊಂಡವರನ್ನು ಆಸ್ಪತ್ರೆ ಸಾಗಿಸಿದ ಮೂಡಿಗೆರೆ ಶಾಸಕಿ ನಯನ ಮೋಟಮ್ಮ


ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ನಿಡುವಾಳೆ ಸಮೀಪ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳು ಯುವಕರು ಮೂಡಿಗೆರೆ ತಾಲೂಕಿನ ಹಾರ್ಮಕ್ಕಿ ಮೂಲದವರಾಗಿದ್ದು, ರಕ್ತಸ್ರಾವದಿಂದ ತೀವ್ರ ಸ್ಥಿತಿಯಲ್ಲಿ ಇದ್ದರು.
ಈ ವೇಳೆ ಹೊರನಾಡು ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಮದುವೆ ಕಾರ್ಯಕ್ರಮದಿಂದ ವಾಪಸ್ಸು ಬರುತ್ತಿದ್ದ ಶಾಸಕಿ ನಯನ ಮೋಟಮ್ಮ ಅವರು ಘಟನೆ ಗಮನಿಸಿ ತಕ್ಷಣ ನೆರವಿಗೆ ಧಾವಿಸಿದರು.
ಮಾನವೀಯತೆ ತೋರಿದ ಶಾಸಕಿ, ಗಾಯಾಳುಗಳನ್ನು ತಮ್ಮ ಕಾರಿನಲ್ಲಿ ಕೊಂಡೊಯ್ದು ನಿಡುವಾಳೆ ಮಾರ್ಗವಾಗಿ ಬಣಕಲ್‌ನ ಕೃಷ್ಣ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಹಾರ್ ಮಕ್ಕಿಯ ಪ್ರಫುಲ್ ಹಾಗೂ ಕಿರಣ್ ಅವರಿಗೆ ಮಂಗಳೂರಿಗೆ ರವಾನೆ ಮಾಡಲಾಗಿದೆ.
ಶಾಸಕಿ ನಯನ ಮೋಟಮ್ಮ ಅವರ ಈ ಮಾನವೀಯ ಕಾರ್ಯ ಸ್ಥಳೀಯರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.