ಮಾದಕ ವ್ಯಸನದಿಂದ ದಾರಿ ತಪ್ಪುತ್ತಿರುವ ಯುವಜನತೆ:ಸಾಮಾಜಿಕ ಕಾರ್ಯಕರ್ತ ಸಾಜೀದ್ ಆತಂಕ

ಇತ್ತೀಚೆಗೆ ಮಾದಕ ವ್ಯಸನದಂತ ದುಶ್ಚಟಗಳಿಗೆ ಯುವಕರು ಬಲಿಯಾಗುತ್ತಿರುವುದು ನಿಜಕ್ಕೂ ಆತಂಕ ಉಂಟುಮಾಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಜೀದ್ ಬಣಕಲ್ ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಬಣಕಲ್ ಪೊಲೀಸರು ಮಾದಕ ವ್ಯಸನಿಗಳನ್ನು ಹಿಡಿದು ಬಿಸಿ ಮುಟ್ಟಿಸಿದ್ದಾರೆ. ಪೋಲೀಸರು ಕೈಗೊಂಡ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೊದಲಿಗೆ ಗಿರಾಕಿಗಳನ್ನು ಸೆಳೆಯಲು ಉಚಿತವಾಗಿ ಅಥವಾ ಕಡಿಮೆ ಬೆಲೆಯಲ್ಲಿ ನಾನಾ ಮಾದಕ ದ್ರವ್ಯಗಳನ್ನು ಕೊಟ್ಟು ಕುತೂಹಲ ಕೆರಳಿಸಿ, ಅವರನ್ನು ವ್ಯಸನಿಗಳನ್ನಾಗಿ ಮಾಡಿ ಬಳಿಕ ಬಡ್ಡಿ ಸಮೇತ ಸುಲಿಗೆ ಮಾಡುತ್ತಾರೆ. ವಿದ್ಯಾಸಂಸ್ಥೆಗಳ ಬಳಿ ಮಾದಕ ಪದಾರ್ಥಗಳು ಮಾರಾಟ ಮಾಡಬಾರದೆಂಬ ಕಠಿಣ ಕಾನೂನಿದ್ದರೂ ಅವೆಲ್ಲಾ ಗಾಳಿಯಲ್ಲಿ ತೂರಾಡುತ್ತಿವೆ ಎಂದರು.

ಮಾದಕ ವ್ಯಸನಗಳಿಗೆ ದಾಸನಾದನೆಂದರೆ ಕಾಸು ಕೊಟ್ಟು ರೋಗಗಳನ್ನು ಕೊಂಡಂತೆ. ಒಂದು ದಿವಸ ಅಮಲೇರಿಸಿಕೊಳ್ಳದಿದ್ದರೆ ಸರಿಯಾಗಿ ನಿದ್ದೆಕೂಡ ಹತ್ತುವುದಿಲ್ಲ. ದೈಹಿಕವಾಗಿ ದುರ್ಬಲನಾಗಿ ಹಲವು ರೋಗಗಳಿಗೆ ತುತ್ತಾಗುತ್ತಾರೆ. ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಮೆದುಳು, ಹೃದಯ ಸಂಬಂಧಿ ಕಾಯಿಲೆಗಳು, ನಪುಂಸಕತ್ವ, ರಕ್ತದೊತ್ತಡ ಹೀಗೆ ಹಲವು ಮಾರಕ ರೋಗಗಳಿಗೆ ಆಧಿಪತಿಯಾಗುತ್ತಾನೆ.ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಂತಹ ಹಲವು ಪ್ರಸಂಗಗಳು ನಮ್ಮ ಕಣ್ಣ ಮುಂದೆಯೇ ಇದೆ.ಇಂದಿನ ಯುವಜನತೆ ಹಲವಾರು ಕ್ಷೇತ್ರಗಳಲ್ಲಿ ಬುದ್ಧಿವಂತರಾಗಿದ್ದರೂ, ದುಶ್ಚಟಗಳು ಅವರನ್ನು ಅವನತಿಯ ಹಂತಕ್ಕೆ ತಲುಪಿಸಿದೆ. ಮೋಜಿನ ಹೆಸರಿನಲ್ಲಿ ಕ್ಷಣಿಕ ತೃಪ್ತಿಗಾಗಿ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯಾವ ಉದ್ದೇಶಕ್ಕಾಗಿ ಕಾಲೇಜು ಸೇರಿದರೋ ಆ ಉದ್ದೇಶವನ್ನು ಮರೆತು ಚಟದಾಸರಾಗಿ ಪೋಷಕರ ಕನಸುಗಳಿಗೆ ಎಳ್ಳುನೀರು ಬಿಟ್ಟು ಇಡೀ ಕುಟುಂಬವನ್ನೇ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡುತಿದ್ದಾರೆ. ‘‘ನನಗೆ ನೂರು ಶಕ್ತ ಯುವಕರನ್ನು ಕೊಡಿ ಇಡೀ ದೇಶದ ಚಿತ್ರಣವನ್ನೇ ಬದಲಾಯಿಸಬಲ್ಲೆ’’ ಎಂದು ವಿವೇಕಾನಂದರು ಘರ್ಜಿಸಿದ ನಾಡಿನ ಯುವಕರು ಮತ್ತೇರಿಸಿಕೊಂಡು ಅಬ್ಬೇಪಾರಿಗಳಂತೆ ಅಲೆಯುತ್ತಿದ್ದಾರೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಮತ್ತಷ್ಟು ಯುವಕರು ಇದಕ್ಕೆ ಬಲಿಯಾಗಿ ಜೀವ ಕಳೆದುಕೊಳ್ಳುತ್ತಾರೆ.
ವರದಿ :✍️ಸೂರಿ ಬಣಕಲ್