ಅಭಿವೃದ್ಧಿಯ ವಿಚಾರದಲ್ಲಿ ನಾವೆಲ್ಲ ಒಂದು ತಂಡವಾಗಿ ಕೆಲಸಮಾಡಬೇಕೆಂದು ಸಲಹೆ ನೀಡಿದ ಸಿದ್ದರಾಮಯ್ಯ.
- ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಸವರಾಜ್ ಬೊಮ್ಮಾಯಿಯವರಿಗೆ ಸಿದ್ದರಾಮಯ್ಯ ಅಭಿನಂದನೆ
- ‘ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸೊಲ್ಲೆತ್ತಲು ನೀವು ಧೈರ್ಯ ತೋರಬೇಕು’
- ‘ಕೇಂದ್ರದಿಂದ ಬರಪರಿಹಾರ, GST ಪಾಲು, ತೆರಿಗೆ ಹಂಚಿಕೆ, ಕೊರೊನಾ ನಿಯಂತ್ರಣಕ್ಕೆ ನೆರವು ಒದಗಿಸುವ ಕೆಲಸ ಮಾಡಬೇಕು’
ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿಯವರಿಗೆ ಶುಭಾಶಯ ತಿಳಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು ಕೇಂದ್ರದ ಮಲತಾಯಿ ಧೋರಣೆಯಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಕಿಡಿಕಾರಿದ್ದಾರೆ.
‘ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಸವರಾಜ್ ಬೊಮ್ಮಾಯಿ ಯವರಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು. ಜವಾಬ್ದಾರಿಯುತ ವಿರೋಧಪಕ್ಷವಾಗಿ ನಿಮಗೆ ರಚನಾತ್ಮಕ ಸಹಕಾರದ ಭರವಸೆಯನ್ನು ನೀಡಬಯಸುತ್ತೇನೆ. ಇದೇ ರೀತಿಯ ಸಹಕಾರ ನಿಮ್ಮ ಪಕ್ಷದಿಂದಲೂ ಸಿಗಲಿ ಎಂದು ಹಾರೈಸುತ್ತೇನೆ. ಕಳೆದೆರಡು ವರ್ಷಗಳಿಂದ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಎಸಗಿರುವುದು ಕೇಂದ್ರದ ಬಿಜೆಪಿ ಸರ್ಕಾರ. ಅಧಿಕಾರದ ಆಸೆಯೋ, ತಿಳುವಳಿಕೆಯ ಕೊರತೆಯೋ, ಇಲ್ಲವೇ ಅವ್ಯಕ್ತ ಭೀತಿಯೋ ಬಿ.ಎಸ್.ಯಡಿಯೂರಪ್ಪನವರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸೊಲ್ಲೆತ್ತಲಿಲ್ಲ. ಆ ಧೈರ್ಯ ನೀವು ತೋರಿಸುತ್ತೀರಿ ಎಂದು ನಂಬಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಬರಪರಿಹಾರ, ಜಿಎಸ್ಟಿ ಪಾಲು, ತೆರಿಗೆ ಹಂಚಿಕೆ, ಕೊರೊನಾ ನಿಯಂತ್ರಣಕ್ಕೆ ನೆರವು ಈ ಎಲ್ಲ ವಿಚಾರಗಳಲ್ಲಿಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿದೆ. ಪ್ರಧಾನಿ ಮೋದಿಯವರ ಗಮನಕ್ಕೆ ತಂದು ರಾಜ್ಯಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ನೀವು ಆದ್ಯತೆಯಿಂದ ಮಾಡಬೇಕು. ರಾಜ್ಯಕ್ಕೆ ಅನ್ಯಾಯವಾದಾಗ ಸರ್ವಪಕ್ಷಗಳ ಸಭೆ ಮತ್ತು ನಿಯೋಗದ ಮೂಲಕ ನ್ಯಾಯ ಪಡೆಯುವ ಪರಂಪರೆ ನಮ್ಮಲ್ಲಿದೆ. ಕಳೆದ 2 ವರ್ಷಗಳ ಅವಧಿಯಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಬುನಾದಿಯಾದ ಮುಕ್ತ ಚರ್ಚೆ-ಸಂವಾದಗಳೇ ನಿಂತುಬಿಟ್ಟಿವೆ. ನೀವು ಇದಕ್ಕೆ ಮರುಚಾಲನೆ ನೀಡುವಿರೆಂಬ ನಿರೀಕ್ಷೆ ನನ್ನದು’ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ.
‘ಮುಖ್ಯಮಂತ್ರಿ ಸ್ಥಾನ ಪಕ್ಷದ ಹುದ್ದೆಯಲ್ಲ, ಅದು ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು. ವಿರೋಧ ಪಕ್ಷವಾಗಿ ಸೈದ್ಧಾಂತಿಕ ಸಂಘರ್ಷ ಜಾರಿಯಲ್ಲಿದ್ದರೂ ರಾಜ್ಯದ ಅಭಿವೃದ್ಧಿಯ(State Development)ವಿಚಾರದಲ್ಲಿ ನಾವೆಲ್ಲ ಒಂದು ತಂಡವಾಗಿ ಕೆಲಸಮಾಡಬೇಕೆಂದು ನಿಮಗಿಂತ ವಯಸ್ಸು ಮತ್ತು ಅನುಭವದಲ್ಲಿ ಹಿರಿಯನಾದ ನನ್ನ ಸಲಹೆಯಾಗಿದೆ. ಸಾರ್ವಜನಿಕ ಮಹತ್ವದ ಹತ್ತಾರು ಪತ್ರಗಳನ್ನು ಬರೆದರೂ ಪ್ರತಿಕ್ರಿಯಿಸುವ ಸೌಜನ್ಯವನ್ನೂ ಹಿಂದಿನ ಮುಖ್ಯಮಂತ್ರಿಗಳು ತೋರಿಲ್ಲ ಎನ್ನುವುದನ್ನು ವಿಷಾದದಿಂದ ಹೇಳಬೇಕಾಗಿದೆ. ಪಾರದರ್ಶಕತೆ ಪ್ರಜಾಪ್ರಭುತ್ವದ ಆತ್ಮವಾಗಿದೆ. ನಿಮ್ಮ ಕಾಲದಲ್ಲಿಯಾದರೂ ಮಾಹಿತಿ ವಿನಿಮಯ ಸುಗಮವಾಗಿ ನಡೆಯುವಂತೆ ಮಾಡುವಿರೆಂದು ನಂಬಿದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಣಕಲ್ ನ್ಯೂಸ್ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.