ಗುರು ತೋರಿದ ದಾರಿಯಲ್ಲಿ ಸಾಗೋಣ ತಿರುಓಣಂ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ

ಬಣಕಲ್ :ಬ್ರಹ್ಮಶ್ರೀ ನಾರಾಯಣ ಗುರುಗಳು ತೋರಿದ ಸಮಾನತೆ, ಪ್ರೀತಿ, ಮಾನವೀಯತೆಯ ದಾರಿಯಲ್ಲಿ ಎಲ್ಲರೂ ಸಾಗಬೇಕಿದೆ ಎಂದು ಬಣಕಲ್ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಅಧ್ಯಕ್ಷರಾದ ರಾಮಚಂದ್ರ ಹೇಳಿದರು.
ಬಣಕಲ್ ಹಿರೇಬೈಲ್‌ನ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ವತಿಯಿಂದ ಬಣಕಲ್‌ನಲ್ಲಿ ನಡೆದ ತಿರುಓಣಂ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಸರ್ಕಾರವು ಎಲ್ಲಾ ಶಾಲೆ ಕಾಲೇಜುಗಳಿಗೆ ನಾರಾಯಣಗುರುಗಳ ಭಾವಚಿತ್ರವನ್ನು ನೀಡಿ ಗುರುಗಳ ಜಯಂತಿಯನ್ನು ಕಡ್ಡಾಯವಾಗಿ ಶಾಲಾ ಕಾಲೇಜುಗಳಲ್ಲಿ ಆಚರಿಸಲು ಸೂಚಿಸಬೇಕು. ನಾರಾಯಣ ಗುರುಗಳ ತತ್ವ ಸಿದ್ದಾಂತ ಯುವಪೀಳಿಗೆಗೆ ತಲುಪಿಸಬೇಕಿದೆ ಎಂದರು.
ಶಿಕ್ಷಕರಾದ ಭಕ್ತೇಶ್ ಮಾತನಾಡಿ, ನಾರಾಯಣಗುರುಗಳು ಅಸ್ಪೃಶ್ಯತೆ ನಿವಾರಣೆ, ಹಿಂದುಳಿದ ವರ್ಗಗಳ ಉನ್ನತಿ ಹಾಗೂ ಎಲ್ಲರಿಗೂ ದೇವಾಲಯ ಪ್ರವೇಶ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾಂತಿಕಾರಕ ಹೆಜ್ಜೆಗಳನ್ನು ಇರಿಸಿದರು. ಶಿಕ್ಷಣದ ಮೂಲಕ ಜಾಗೃತಿ ಮೂಡಿಸಬೇಕೆಂದು ಪ್ರತಿಪಾದಿಸಿದರು ಎಂದರು.
ಮಹಿಳೆಯರಿಗೆ ಹೂವಿನ ರಂಗೋಲಿ ಸ್ಪರ್ಧೆ, ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಣಕಲ್ ಹಿರೇಬೈಲ್‌ನ ಬ್ರಹ್ಮಶ್ರೀ ನಾರಾಯಣಗುರು ಸಂಘದ ಗೌರವ ಅಧ್ಯಕ್ಷರಾದ ವೇಲಾಯುಧನ್, ಈಶ್ವರ್ ಬಾಳೂರು, ನಾರಾಯಣಗುರು ಸಂಘದ ತಾಲ್ಲೂಕು ಅಧ್ಯಕ್ಷ ಸುಧಾಕರ್ ಕುನ್ನಳ್ಳಿ, ಸಕಲೇಶಪುರ ಸಂಘದ ಅಧ್ಯಕ್ಷರಾದ ಲಕ್ಷö್ಮಣ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ್ ಅತ್ತಿಗೆರೆ, ಬಣಕಲ್ ಪೊಲೀಸ್ ಠಾಣೆಯ ಪಿಎಸ್‌ಐ ದಿಲೀಪ್ ಕುಮಾರ್, ಸಂಘದ ಕಾನೂನು ಸಲಹೆಗಾರರಾದ ಪರೀಕ್ಷಿತ್ ಜಾವಳಿ, ಬಣಕಲ್ ಜೇಸಿಐ ಅಧ್ಯಕ್ಷರಾದ ರಂಜಿತ್ ಕನ್ನಗೆರೆ, ಶಿಕ್ಷಕರಾದ ಲೋಕೇಶ್, ವಸಂತ್, ಸಂಘದ ಪದಾಧಿಕಾರಿಗಳಾದ ಬಾಲಕೃಷ್ಣ, ಪ್ರಭಾಕರ್, ಕೆ.ಎಂ ರವಿ, ಸುನೀಲ್, ಮಂಜು ಬಿ.ಆರ್, ಶರತ್, ದೀಕ್ಷಿತ್, ರಾಘವನ್, ರವಿ ಬಾಳೂರು, ದಾಮೋದರ್, ನಳರಾಜ್, ಬಾಬು ಹಿರೇಬೈಲ್ ಮುಂತಾದವರು ಇದ್ದರು.